ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ಮಳೆ: 20ಕ್ಕೂ ಹೆಚ್ಚು ವಿಮಾನಗಳು ಬೇರೆಡೆಗೆ ಡೈವರ್ಟ್

Untitled design 2026 03 18T232556.488

ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸತತ ಎರಡನೇ ದಿನವೂ ಮಳೆರಾಯ ಅಬ್ಬರಿಸಿದ್ದಾನೆ. ಮಾರ್ಚ್ 17ರಂದು ಆರಂಭವಾದ ವರ್ಷದ ಮೊದಲ ಮಳೆ ಇಂದು (ಮಾರ್ಚ್ 18) ಮತ್ತಷ್ಟು ತೀವ್ರಗೊಂಡಿದ್ದು, ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಸುತ್ತಮುತ್ತ ಭೀಕರ ಆಲಿಕಲ್ಲು ಮಳೆ ಸುರಿದಿದೆ. ಈ ಅನಿರೀಕ್ಷಿತ ಹವಾಮಾನ ವೈಪರೀತ್ಯದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಕಾರ್ಯಾಚರಣೆಗೆ ತೀವ್ರ ಅಡ್ಡಿ ಉಂಟಾಗಿದ್ದು, ಪ್ರಯಾಣಿಕರು ಹೈರಾಣಾಗಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಸಂಕಷ್ಟ

ಬುಧವಾರ ಸಂಜೆ 5 ಗಂಟೆಯ ನಂತರ ದೇವನಹಳ್ಳಿ ಭಾಗದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆಯ ತೀವ್ರತೆ ಮತ್ತು ದಟ್ಟ ಮೋಡಗಳಿಂದಾಗಿ ವಿಮಾನಗಳ ಲ್ಯಾಂಡಿಂಗ್‌ಗೆ ತೀವ್ರ ಸಮಸ್ಯೆ ಎದುರಾಯಿತು. ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿಗೆ ಆಗಮಿಸಬೇಕಿದ್ದ 20ಕ್ಕೂ ಅಧಿಕ ವಿಮಾನಗಳನ್ನು ನೆರೆಯ ರಾಜ್ಯಗಳ ವಿಮಾನ ನಿಲ್ದಾಣಗಳಿಗೆ ಡೈವರ್ಟ್ ಮಾಡಲಾಗಿದೆ.

ಮುಖ್ಯವಾಗಿ ರಾಷ್ಟ್ರ ರಾಜಧಾನಿ ದೆಹಲಿಯಿಂದ ಬೆಂಗಳೂರಿಗೆ ಬರಬೇಕಿದ್ದ ಸುಮಾರು 15 ವಿಮಾನಗಳನ್ನು ತಮಿಳುನಾಡಿನ ಚೆನ್ನೈಗೆ ಕಳುಹಿಸಲಾಗಿದೆ. ಉಳಿದಂತೆ ಹೈದರಾಬಾದ್, ಮಂಗಳೂರು, ಕೊಚ್ಚಿ ಸೇರಿದಂತೆ ವಿವಿಧ ನಗರಗಳಿಂದ ಬರುತ್ತಿದ್ದ ವಿಮಾನಗಳನ್ನು ಸುರಕ್ಷತೆಯ ದೃಷ್ಟಿಯಿಂದ ಹತ್ತಿರದ ನಿಲ್ದಾಣಗಳಿಗೆ ರವಾನಿಸಲಾಗಿದೆ. ಕೇವಲ ದೇಶೀಯ ವಿಮಾನಗಳಷ್ಟೇ ಅಲ್ಲದೆ, ಪುಕೆಟ್‌ನಂತಹ ಅಂತರಾಷ್ಟ್ರೀಯ ತಾಣಗಳಿಂದ ಬರುತ್ತಿದ್ದ ವಿಮಾನಗಳೂ ಸಹ ಮಾರ್ಗ ಬದಲಾವಣೆ ಮಾಡಿವೆ.

ಮಳೆಯ ಆರ್ಭಟದಿಂದಾಗಿ ಕೇವಲ ವಿಮಾನಗಳ ಹಾದಿ ಬದಲಾವಣೆ ಮಾತ್ರವಲ್ಲದೆ, ಸುಮಾರು 30ಕ್ಕೂ ಹೆಚ್ಚು ವಿಮಾನಗಳ ಟೇಕ್ ಆಫ್ (ನಿರ್ಗಮನ) ಮತ್ತು ಲ್ಯಾಂಡಿಂಗ್ (ಆಗಮನ) ಪ್ರಕ್ರಿಯೆಯಲ್ಲಿ ಭಾರಿ ವಿಳಂಬವಾಗಿದೆ. ಏರ್ ಟ್ರಾಫಿಕ್ ಸಮಸ್ಯೆ ಮತ್ತು ರನ್‌ವೇ ಮೇಲಿನ ಕಡಿಮೆ ಗೋಚರತೆಯಿಂದಾಗಿ (Visibility) ಪೈಲಟ್‌ಗಳು ವಿಮಾನಗಳನ್ನು ಇಳಿಸಲು ಹರಸಾಹಸ ಪಟ್ಟಿದ್ದಾರೆ. ಇದರಿಂದಾಗಿ ವಿಮಾನ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತಾಯಿತು.

ದೇವನಹಳ್ಳಿ ಭಾಗದಲ್ಲಿ ಸುರಿದ ಆಲಿಕಲ್ಲು ಮಳೆಯಿಂದಾಗಿ ರಸ್ತೆ ಸಂಚಾರ ಸಂಪೂರ್ಣ ಜರ್ಜರಿತಗೊಂಡಿದೆ. ಹೆದ್ದಾರಿಗಳಲ್ಲಿ ಮಳೆ ನೀರು ನದಿಗಳಂತೆ ಹರಿಯುತ್ತಿದ್ದು, ಬಸ್ ನಿಲ್ದಾಣಗಳು ಮತ್ತು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಮಳೆಯಿಂದ ರಕ್ಷಿಸಿಕೊಳ್ಳಲು ಫ್ಲೈ ಓವರ್‌ಗಳ ಅಡಿ ಆಶ್ರಯ ಪಡೆಯುತ್ತಿರುವುದು ಕಂಡುಬಂತು. ಸಂಜೆ ಕಚೇರಿ ಮುಗಿಸಿ ಮನೆಗೆ ಮರಳುತ್ತಿದ್ದವರಿಗೆ ಈ ಮಳೆ ಭಾರಿ ಅಡಚಣೆ ಉಂಟುಮಾಡಿದೆ.

Exit mobile version