ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ನಾಲ್ಕು ಪ್ರದೇಶಗಳಲ್ಲಿ ಇಂದು ಮಧ್ಯರಾತ್ರಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಕಾರ್ಯಾಚರಣೆ ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ. ಪ್ರತಿಯೊಬ್ಬ ಭಾರತೀಯನೂ ದೇಶದ ಜೊತೆಗೆ ಬೆಂಬಲವಾಗಿ ನಿಲ್ಲಬೇಕೆಂದು ಬಿಜೆಪಿ ಕಾರ್ಯಕರ್ತರಲ್ಲಿ ಮನವಿ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ತಿಳಿಸಿದರು.
ಕಾಂಗ್ರೆಸ್ ಪಕ್ಷವು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ “ಮಾನವಕುಲದ ಅತ್ಯಂತ ಪ್ರಖರ ಅಸ್ತ್ರ ಶಾಂತಿ” ಎಂದು ಟ್ವೀಟ್ ಮಾಡಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಒತ್ತಾಯಿಸಿದ್ದಾರೆ. “ಕಾಂಗ್ರೆಸ್ ಭಯೋತ್ಪಾದಕರ ಪರವಾಗಿದೆಯೇ? ಪಾಕಿಸ್ತಾನದ ಪರವಾಗಿದೆಯೇ? ತಮ್ಮ ನಿಲುವನ್ನು ತಿಳಿಸಿ, ಭಾರತೀಯರ ಕ್ಷಮೆಯನ್ನು ಕೇಳಿ” ಎಂದು ಅವರು ಆಗ್ರಹಿಸಿದ್ದಾರೆ.
ವಿಜಯೇಂದ್ರ ಅವರು, ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ದೇಶದ ಜೊತೆ ನಿಲ್ಲಬೇಕು ಎಂದು ಕರೆ ನೀಡಿದ್ದಾರೆ. ಜನಾಕ್ರೋಶ ಯಾತ್ರೆಯನ್ನು ಇಂದು ಕೋಲಾರ ನಡೆಸಲಾಗುತ್ತಿದ್ದು, ತುಮಕೂರಿನಲ್ಲಿ ನಾಳೆ ನಡೆಯಬೇಕಿದ್ದ ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂ ಕಾರ್ಯಕರ್ತನ ಹತ್ಯೆ: ಎನ್‌ಐಎ ತನಿಖೆಗೆ ಒತ್ತಾಯ, ಪರಿಹಾರ ಘೋಷಣೆ
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆಯಿಂದ ಅವರ ಕುಟುಂಬದ ಆಧಾರ ಸ್ತಂಭವೇ ಕುಸಿದು ಬಿದ್ದಿದೆ. ಈ ದುರ್ಘಟನೆಯಿಂದ ಕುಟುಂಬದ ಕಷ್ಟವನ್ನು ಅರಿತ ಬಿಜೆಪಿಯು, ಸುಹಾಸ್ ಶೆಟ್ಟಿಯ ಕುಟುಂಬಕ್ಕೆ 25 ಲಕ್ಷ ರೂಪಾಯಿಗಳ ಪರಿಹಾರವನ್ನು ಘೋಷಿಸಿದೆ. ರಾಜ್ಯ ಸರ್ಕಾರವೂ ಕೂಡ ಕುಟುಂಬಕ್ಕೆ ಪರಿಹಾರವನ್ನು ಮಂಜೂರು ಮಾಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಿ, ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪಹಲ್ಗಾಮ್ ದಾಳಿ ಮತ್ತು ಹಿಂದೂ ಕಾರ್ಯಕರ್ತರ ಕೊಲೆಗೆ ಖಂಡನೆ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಗಾಯಗಳು ಮರೆಯಾಗುವ ಮೊದಲೇ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಅಮಾನವೀಯ ರೀತಿಯಲ್ಲಿ ಹತ್ಯೆ ಮಾಡಿರುವುದು ಖಂಡನಾರ್ಹ ಎಂದು ವಿಜಯೇಂದ್ರ ಹೇಳಿದ್ದಾರೆ. ಬಿಜೆಪಿಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಇಲಾಖೆಯ ವೈಫಲ್ಯವು ಸ್ಪಷ್ಟವಾಗಿ ಕಂಡುಬಂದಿದೆ. ಸುಹಾಸ್ ಶೆಟ್ಟಿಗೆ ಜೀವಕ್ಕೆ ಬೆದರಿಕೆ ಇದೆ ಎಂಬುದು ಪೊಲೀಸರಿಗೆ ತಿಳಿದಿದ್ದರೂ, ಯಾವುದೇ ರಕ್ಷಣೆಯನ್ನು ಒದಗಿಸದಿರುವುದರಿಂದ ಈ ಕೊಲೆ ಸಂಭವಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗೃಹ ಇಲಾಖೆಯ ವೈಫಲ್ಯದಿಂದ ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆಯಿಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರದ ಮೇಲೆ ಹಿಂದೂಗಳಿಗೆ ವಿಶ್ವಾಸವೇ ಇಲ್ಲದಂತಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ. ರಾಜ್ಯದ ಜನತೆ ಗೃಹ ಇಲಾಖೆಯ ಮೇಲಿನ ಭರವಸೆಯನ್ನು ಕಳೆದುಕೊಂಡಿದ್ದಾರೆ. ಹಿಂದೂ ಕಾರ್ಯಕರ್ತರ ಕೊಲೆಗಳು ಪದೇ ಪದೇ ನಡೆಯುತ್ತಿರುವುದನ್ನು ತಡೆಗಟ್ಟಲು ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.