ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಎನ್‌ಡಿಎ ನಾಯಕರು, ತಕ್ಷಣ ತನಿಖೆ ನಡೆಸಿ ಎಲ್ಲಾ ನೋಂದಣಿ ನಮೂನೆಗಳ ಮರುಪರಿಶೀಲನೆಗೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರಿಗೆ ಇಂದು ದೂರು ಸಲ್ಲಿಸಿದ್ದಾರೆ.
ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ಪ್ರತಿಪಕ್ಷ ನಾಯಕ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ನಿಯೋಗವು ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ, ಪುರಾವೆಗಳ ಸಮೇತ ದೂರು ನೀಡಿದೆ..
ದೂರಿನಲ್ಲಿ, ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆ ಅನುಮೋದಿತ ಮಾರ್ಗಸೂಚಿಗಳಂತೆ ನಡೆಯುತ್ತಿಲ್ಲ ಎಂಬ ಗಂಭೀರ ಆರೋಪ ಮಾಡಲಾಗಿದೆ. ಈ ಪ್ರಕ್ರಿಯೆ ನಡೆಸಬೇಕಾದ ಅಧಿಕಾರಿಗಳು ನಿಯಮಗಳನ್ನು ಪಾಲಿಸದೇ ಪ್ರಜಾಪ್ರಭುತ್ವದ ಆಶಯವನ್ನೇ ಹಾಳು ಮಾಡುತ್ತಿದ್ದಾರೆ ಎಂದು ಎನ್‌ಡಿಎ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಎಸ್‌ಐಆರ್ ಮಾರ್ಗಸೂಚಿಗಳ ಪ್ರಕಾರ, ಬೂತ್ ಮಟ್ಟದ ಅಧಿಕಾರಿಗಳು (BLOs) ಜಿಲ್ಲಾ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕಡ್ಡಾಯವಾಗಿ ಮನೆ-ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕುಟುಂಬದ ಪ್ರತಿಯೊಬ್ಬ ಸದಸ್ಯರ ಗುರುತನ್ನು ವೈಯಕ್ತಿಕವಾಗಿ ಖಚಿತಪಡಿಸಿಕೊಳ್ಳಬೇಕಾಗಿದೆ. ಆದರೆ ತಳಮಟ್ಟದಲ್ಲಿ ಈ ನಿಯಮಗಳು ಪಾಲನೆಯಾಗುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಮುದಾಯ ಭವನಗಳು, ಮಸೀದಿಗಳು ಮತ್ತು ಕೆಲವೊಮ್ಮೆ ಬಿಎಲ್‌ಒಗಳ ಮನೆಗಳಲ್ಲೇ ಕುಳಿತು ನೋಂದಣಿ ನಮೂನೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದೇ ಉದ್ದೇಶಕ್ಕಾಗಿ ವಾಟ್ಸಾಪ್ ಗುಂಪುಗಳನ್ನು ರಚಿಸಿ, ಜನರನ್ನು ಇಂತಹ ಸ್ಥಳಗಳಿಗೆ ಕರೆಸಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಎನ್‌ಡಿಎ ನಿಯೋಗ ದೂರಿದೆ. ಇದು ಎಸ್‌ಐಆರ್ ಮಾರ್ಗಸೂಚಿಗಳ ಉಲ್ಲಂಘನೆಯಾಗಿದ್ದು, ಚುನಾವಣಾ ಪ್ರಕ್ರಿಯೆಯ ತಟಸ್ಥತೆ ಹಾಗೂ ಜಾತ್ಯತೀತ ಸ್ವರೂಪದ ಬಗ್ಗೆ ಗಂಭೀರ ಅನುಮಾನ ಹುಟ್ಟಿಸುತ್ತಿದೆ ಎಂದು ನಾಯಕರು ತಿಳಿಸಿದ್ದಾರೆ.
ಈ ರೀತಿಯ ಅಕ್ರಮಗಳಿಂದ ಅಸ್ಥಿರ ಮತ್ತು ನಂಬಿಕೆಗೆ ಅರ್ಹವಲ್ಲದ ಮತದಾರರ ಪಟ್ಟಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಭಾರತೀಯ ಚುನಾವಣಾ ಆಯೋಗ ನಿಗದಿಪಡಿಸಿರುವ ಕಾರ್ಯವಿಧಾನಗಳಿಂದ ಯಾವುದೇ ವಿಚಲನೆಗೆ ಅವಕಾಶವಿಲ್ಲ ಎಂದು ಎನ್‌ಡಿಎ ನಾಯಕರು ಒತ್ತಿ ಹೇಳಿದ್ದಾರೆ.
ಆದ್ದರಿಂದ, ತಕ್ಷಣವೇ ಈ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಮನೆ-ಮನೆಗೆ ಭೇಟಿ ನೀಡಿ ಎಲ್ಲಾ ನೋಂದಣಿ ನಮೂನೆಗಳ ಮರುಪರಿಶೀಲನೆ ಮಾಡಿಸಬೇಕು. ಜೊತೆಗೆ, ಈ ಅಕ್ರಮಗಳಿಗೆ ಕಾರಣರಾದ ಅಧಿಕಾರಿಗಳು ಮತ್ತು ರಾಜಕೀಯ ಪದಾಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಎನ್‌ಡಿಎ ನಿಯೋಗ ಮುಖ್ಯ ಚುನಾವಣಾಧಿಕಾರಿಯನ್ನು ಒತ್ತಾಯಿಸಿದೆ.
