SIR ಪ್ರಕ್ರಿಯೆಯಲ್ಲಿ ನಾವು ಕೈ ಹಾಕಿಲ್ಲ, ಆಯೋಗದ ಅಭಿಯಾನದಲ್ಲಿ ಭಿನ್ನಾಭಿಪ್ರಾಯ ಇದೆ: CM ಡಿ.ಕೆ. ಶಿವಕುಮಾರ್

Web Photo Editor 2026 07 06T114212.130

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಮಧ್ಯಪ್ರವೇಶ ಮಾಡಿಲ್ಲ. ಆದರೆ ಚುನಾವಣಾ ಆಯೋಗ ಈ ಅಭಿಯಾನವನ್ನು ನಡೆಸುತ್ತಿರುವ ರೀತಿಯ ಬಗ್ಗೆ ಮಾತ್ರ ಸರ್ಕಾರಕ್ಕೆ ಭಿನ್ನಾಭಿಪ್ರಾಯ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

SIR ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ವಿಚಾರದಲ್ಲಿ ಸರ್ಕಾರ ಈಗಾಗಲೇ ನ್ಯಾಯಾಲಯದಲ್ಲಿ ತನ್ನ ವಾದ ಮಂಡಿಸಿದೆ ಎಂದು ಹೇಳಿದರು. ನ್ಯಾಯಾಲಯ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಮತದಾನದ ಹಕ್ಕು ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಯಾವುದೇ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ನೀಡದಷ್ಟು ಸಹಕಾರವನ್ನು ಕರ್ನಾಟಕ ಸರ್ಕಾರ ನೀಡಿದೆ. ಆದರೂ SIR ಪ್ರಕ್ರಿಯೆಯಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಅವರು ಪುನರುಚ್ಚರಿಸಿದರು.

ಜನರು ತಮ್ಮ ಮತದಾನದ ಹಕ್ಕನ್ನು ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಸರ್ಕಾರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಬಿಎಲ್‌ಎಗಳನ್ನು ನೇಮಿಸುವ ಅವಕಾಶವಿದ್ದು, ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇದೆ. ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದಲೇ ವಿಪಕ್ಷಗಳಿಗೆ ಭಯ ಉಂಟಾಗಿದೆ. ಅವರಿಗೆ ಚುನಾವಣಾ ಆಯೋಗದ ಮೇಲೆಯೇ ನಂಬಿಕೆ ಇಲ್ಲದ ಕಾರಣವೇ ಪ್ರಕ್ರಿಯೆ ರದ್ದುಪಡಿಸುವಂತೆ ದೂರು ನೀಡುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು. ಆದರೆ ಪ್ರಕ್ರಿಯೆ ಮುಂದುವರಿಸಬೇಕೋ ಅಥವಾ ರದ್ದು ಮಾಡಬೇಕೋ ಎಂಬುದು ಸಂಪೂರ್ಣವಾಗಿ ಚುನಾವಣಾ ಆಯೋಗದ ತೀರ್ಮಾನ ಎಂದು ಅವರು ಹೇಳಿದರು.

ಜನರಿಗೆ ಅನುಕೂಲವಾಗುವಂತೆ ಜಾತಿ ಪ್ರಮಾಣ ಪತ್ರ ಹಾಗೂ ವಾಸ ದೃಢೀಕರಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಲಾಗಿದೆ. 2002ರ ಮತದಾರರ ದಾಖಲೆಗಳು ಹಲವರ ಬಳಿ ಇಲ್ಲದಿರುವುದರಿಂದ, ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನೂ ಸರ್ಕಾರ ಕಲ್ಪಿಸಿದೆ. ಮತದಾನದ ಹಕ್ಕು ಉಳಿಸಿಕೊಳ್ಳುವಂತೆ ಜನರಿಗೆ ಮನವಿ ಮಾಡುತ್ತಿದ್ದೇವೆ. ಆದರೆ ಬಡವರು ಮತ್ತು ಅಲ್ಪಸಂಖ್ಯಾತರಿಗೆ ತೊಂದರೆ ಆಗಬೇಕು ಎಂಬ ಉದ್ದೇಶದಿಂದಲೇ ವಿಪಕ್ಷಗಳು ವಿರೋಧಿಸುತ್ತಿವೆ ಎಂದು ಅವರು ಟೀಕಿಸಿದರು.

ಬಾಂಗ್ಲಾದೇಶದ ಅಕ್ರಮ ವಲಸಿಗರ ವಿಚಾರವನ್ನೂ ಪ್ರಸ್ತಾಪಿಸಿದ ಮುಖ್ಯಮಂತ್ರಿ, ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಕ್ರಮ ಕೈಗೊಳ್ಳಬೇಕಿತ್ತು ಎಂದರು. ಎಲ್ಲಿಯಾದರೂ SIR ಪ್ರಕ್ರಿಯೆಯಲ್ಲಿ ಲೋಪಗಳಿದ್ದರೆ ತನಿಖೆ ನಡೆಸಲಿ, ನಮಗೆ ಯಾವುದೇ ಆಕ್ಷೇಪವಿಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮ ಶಾಸಕರು ಮತ್ತು ಮಾಜಿ ಶಾಸಕರಿಗೂ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇನೆ. ಜನರ ಮತದಾನದ ಹಕ್ಕು ಉಳಿಸುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದು ಹೇಳಿದರು.

ಇದೇ ವೇಳೆ ಬರ ನಿರ್ವಹಣೆ ಕುರಿತು ಮಾತನಾಡಿದ ಸಿಎಂ, ಇಂದು ಬೀದರ್‌ಗೆ ತೆರಳಿ ಅನುಭವ ಮಂಟಪ ಕಾಮಗಾರಿ ವೀಕ್ಷಣೆ ಮಾಡುತ್ತೇವೆ. ನಾಳೆ ಕಲಬುರ್ಗಿ ವಿಭಾಗದಲ್ಲಿ ಮಳೆ, ಜಲಾಶಯಗಳ ಒಳಹರಿವು ಹಾಗೂ ಕುಡಿಯುವ ನೀರಿನ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

Exit mobile version