ಬೀದರ್‌ನಲ್ಲಿ ಇಂದು ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶ ನಡೆಯಲಿದ್ದು, ಈ ಕಾರ್ಯಕ್ರಮ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ. ನಗರದ ಗಣೇಶ್ ಮೈದಾನದಲ್ಲಿ ಸಂಜೆ 5 ಗಂಟೆಗೆ ಸಮಾವೇಶ ಆರಂಭವಾಗಲಿವೆ. ರಾಜ್ಯ ಮಟ್ಟದ ಪ್ರಮುಖ ನಾಯಕರು ಒಂದೇ ವೇದಿಕೆಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಮಾವೇಶ ಕಾಂಗ್ರೆಸ್ ಶಕ್ತಿ ಪ್ರದರ್ಶನದ ವೇದಿಕೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜಿಲ್ಲಾ ಕಾಂಗ್ರೆಸ್ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿರುವ ಈ ಬೃಹತ್ ಸಮಾವೇಶಕ್ಕೆ ಈಗಾಗಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸಾವಿರಾರು ಕಾರ್ಯಕರ್ತರು ಮತ್ತು ಪಕ್ಷದ ಬೆಂಬಲಿಗರು ಭಾಗವಹಿಸುವ ನಿರೀಕ್ಷೆಯಿರುವುದರಿಂದ ಮೈದಾನದಲ್ಲಿ ದೊಡ್ಡ ಮಟ್ಟದ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕರ್ತರು ಮಳೆಯ ತೊಂದರೆ ಇಲ್ಲದೆ ಸಮಾವೇಶದಲ್ಲಿ ಭಾಗವಹಿಸಲು ವಾಟರ್‌ಪ್ರೂಫ್ ಟೆಂಟ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಸಮಾವೇಶದ ಎಲ್ಲ ಭಾಗವಹಿಸುವವರಿಗೂ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮ ಸ್ಪಷ್ಟವಾಗಿ ಕಾಣುವಂತೆ ಎಲ್‌ಇಡಿ ಸ್ಕ್ರೀನ್‌ಗಳನ್ನೂ ಅಳವಡಿಸಲಾಗಿದೆ. ಸಭೆಗೆ ಆಗಮಿಸುವ ಸಾವಿರಾರು ಜನರಿಗೆ ಆಸನ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಸಿದ್ಧಪಡಿಸಲಾಗಿದೆ.
ಈ ಸಮಾವೇಶದ ವಿಶೇಷತೆ ಎಂದರೆ, ರಾಜ್ಯದ ಪ್ರಮುಖ ನಾಯಕರು ಮೊದಲ ಬಾರಿಗೆ ಬೀದರ್‌ಗೆ ಆಗಮಿಸುತ್ತಿರುವುದು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ವಿಶೇಷ ಉತ್ಸಾಹ ಕಂಡುಬರುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಕಾರ್ಯಕರ್ತರು, ಮುಖಂಡರು, ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಬೀದರ್‌ಗೆ ಆಗಮಿಸುತ್ತಿದ್ದಾರೆ. ಜಿಲ್ಲೆಯ ರಾಜಕೀಯ ವಾತಾವರಣವೇ ಈಗ ಕಾಂಗ್ರೆಸ್ ಸಮಾವೇಶದ ಸುತ್ತಮುತ್ತ ತಿರುಗುತ್ತಿರುವಂತಾಗಿದೆ. ಸ್ಥಳೀಯ ಕಾಂಗ್ರೆಸ್ ಮುಖಂಡರು ಸಮಾವೇಶ ಯಶಸ್ವಿಯಾಗಲು ಹಲವು ದಿನಗಳಿಂದ ಶ್ರಮಿಸುತ್ತಿದ್ದು, ಇದು ಮುಂದಿನ ರಾಜಕೀಯ ಸಮೀಕರಣಗಳಿಗೂ ದಿಕ್ಕು ತೋರಿಸಬಹುದಾದ ಕಾರ್ಯಕ್ರಮವೆಂದು ಹೇಳಲಾಗುತ್ತಿದೆ.
ಸಮಾವೇಶಕ್ಕೆ ಭಾರೀ ಜನಸ್ತೋಮ ಸೇರುವ ಸಾಧ್ಯತೆ ಇರುವುದರಿಂದ ಭದ್ರತಾ ವ್ಯವಸ್ಥೆಯನ್ನೂ ಕಟ್ಟುನಿಟ್ಟಾಗಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕೈಗೊಂಡಿದೆ. ಓರ್ವ ಡಿಐಜಿ, ಇಬ್ಬರು ಎಸ್‌ಪಿ, ಎಂಟು ಡಿವೈಎಸ್‌ಪಿ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ರೂಪಿಸಲಾಗಿದೆ. ಜೊತೆಗೆ 1200ಕ್ಕೂ ಹೆಚ್ಚು ಕಾನ್ಸ್‌ಟೇಬಲ್‌ಗಳು, 6 ಕೆಎಸ್‌ಆರ್‌ಪಿ ತುಕಡಿಗಳು ಮತ್ತು 300 ಹೋಮ್‌ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಮಾವೇಶ ನಡೆಯುವ ಗಣೇಶ್ ಮೈದಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಶೇಷ ನಿಗಾವಹಿಸಲಾಗುತ್ತಿದ್ದು, ವಾಹನ ಸಂಚಾರ ಮತ್ತು ಜನಸಂದಣಿ ನಿಯಂತ್ರಣಕ್ಕೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಬೀದರ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೃಹತ್ ಸಮಾವೇಶವು ಕೇವಲ ರಾಜಕೀಯ ಸಭೆಯಷ್ಟೇ ಅಲ್ಲ, ಪಕ್ಷದ ಸಂಘಟನೆ ಬಲ, ಕಾರ್ಯಕರ್ತರ ಒಗ್ಗಟ್ಟು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪ್ರಭಾವವನ್ನು ತೋರಿಸುವ ಪ್ರಮುಖ ವೇದಿಕೆಯಾಗುತ್ತಿದೆ. ಬೀದರ್‌ನ ಈ ಸಮಾವೇಶವನ್ನು ರಾಜ್ಯ ರಾಜಕೀಯದ ಪ್ರಮುಖ ಬೆಳವಣಿಗೆಯಾಗಿ ರೂಪಿಸಿವೆ.
