ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ (NALSA) ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದಂತೆ, 2026ರ ಮಾರ್ಚ್ 14ರಂದು ವರ್ಷದ ಪ್ರಥಮ ‘ರಾಷ್ಟ್ರೀಯ ಲೋಕ ಅದಾಲತ್’ ಅನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ದಾವಣಗೆರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾವೀರ ಮ.ಕರೆಣ್ಣವರ ಅವರು ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ತಮ್ಮ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಕರೆ ನೀಡಿದ್ದಾರೆ.
ಶುಲ್ಕ ರಹಿತ ಮತ್ತು ತ್ವರಿತ ನ್ಯಾಯ
ಲೋಕ ಅದಾಲತ್‌ನ ಅತಿ ದೊಡ್ಡ ವಿಶೇಷತೆಯೆಂದರೆ ಇದು ಸಂಪೂರ್ಣ ಶುಲ್ಕ ರಹಿತ ಸೇವೆ. ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣ ದಾಖಲಿಸಿ ನ್ಯಾಯಾಲಯದ ಶುಲ್ಕ (Court Fee) ಪಾವತಿಸಿದ್ದರೆ, ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ಇತ್ಯರ್ಥವಾದಲ್ಲಿ, ಪಾವತಿಸಿದ ಪೂರ್ಣ ಶುಲ್ಕವನ್ನು ಮರುಪಾವತಿಸಲಾಗುವುದು. ಇದು ಕೇವಲ ಹಣ ಉಳಿತಾಯ ಮಾಡುವುದಲ್ಲದೆ, ವರ್ಷಗಳ ಕಾಲ ನ್ಯಾಯಾಲಯಕ್ಕೆ ಅಲೆದಾಡುವುದನ್ನ ತಪ್ಪಿಸುತ್ತದೆ.
ಲೋಕ ಅದಾಲತ್‌ನ ಪ್ರಮುಖ ಅನುಕೂಲಗಳು:
-
ಅಂತಿಮ ತೀರ್ಪು: ಇಲ್ಲಿ ನೀಡಲಾಗುವ ತೀರ್ಪು ಸಿವಿಲ್ ನ್ಯಾಯಾಲಯದ ಡಿಕ್ರಿಗೆ ಸಮನಾಗಿರುತ್ತದೆ. ಇದಕ್ಕೆ ಕಾನೂನಿನ ಮಾನ್ಯತೆ ಇದ್ದು, ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ.
-
ಸೌಹಾರ್ದಯುತ ಪರಿಹಾರ: ಇಲ್ಲಿ ಯಾರು ಗೆದ್ದವರಲ್ಲ, ಯಾರು ಸೋತವರಲ್ಲ. ಉಭಯ ಕಡೆಯವರು ಪರಸ್ಪರ ಒಪ್ಪಿಗೆಯೊಂದಿಗೆ ರಾಜಿ ಮಾಡಿಕೊಳ್ಳುವುದರಿಂದ ಹಳೆಯ ಹಗೆತನ ಮರೆತು ಸಂಬಂಧಗಳು ಸುಧಾರಿಸುತ್ತವೆ.
-
ಸಮಯದ ಉಳಿತಾಯ: ದಶಕಗಳ ಕಾಲ ನಡೆಯುವ ವ್ಯಾಜ್ಯಗಳಿಗೆ ಒಂದೇ ದಿನದಲ್ಲಿ ಶಾಶ್ವತ ಮುಕ್ತಿ ಸಿಗಲಿದೆ.
ಯಾವೆಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ?
ಸಾರ್ವಜನಿಕರು ಈ ಕೆಳಗಿನ ವಿಭಾಗಗಳಲ್ಲಿ ರಾಜಿ ಸಂಧಾನ ಮಾಡಿಕೊಳ್ಳಲು ಅವಕಾಶವಿದೆ:
-
ಸಿವಿಲ್ ಪ್ರಕರಣಗಳು: ಆಸ್ತಿ ವಿಭಾಗ, ಗಡಿ ವಿವಾದ, ಬಾಡಿಗೆ ಸಮಸ್ಯೆ, ಚೆಕ್ ಬೌನ್ಸ್ ಪ್ರಕರಣಗಳು ಮತ್ತು ಬ್ಯಾಂಕ್ ಸಾಲ ವಸೂಲಾತಿ.
-
ಕೌಟುಂಬಿಕ ವಿವಾದಗಳು: ವಿಚ್ಛೇದನ ಹೊರತುಪಡಿಸಿ ಉಳಿದ ವೈವಾಹಿಕ ಸಮಸ್ಯೆಗಳು ಹಾಗೂ ಜೀವನಾಂಶದ (Maintenance) ಪ್ರಕರಣಗಳು.
-
ಅಪರಾಧಿಕ ಪ್ರಕರಣಗಳು: ಕಾನೂನಿನಡಿ ರಾಜಿ ಮಾಡಿಕೊಳ್ಳಬಹುದಾದ ಸಣ್ಣಪುಟ್ಟ ಹೊಡೆದಾಟ, ವಿದ್ಯುತ್ ಕಳ್ಳತನ ಹಾಗೂ ಅಬಕಾರಿ ಪ್ರಕರಣಗಳು.
-
ಇತರೆ: ಮೋಟಾರು ವಾಹನ ಅಪಘಾತ ಪರಿಹಾರ (MACT), ಕಾರ್ಮಿಕ ವಿವಾದಗಳು, ನೀರಿನ ಮತ್ತು ವಿದ್ಯುತ್ ಬಿಲ್ ಬಾಕಿ ಪ್ರಕರಣಗಳು.
ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣ ಬಾಕಿ ಇದ್ದರೆ, ಕಕ್ಷಿದಾರರು ತಮ್ಮ ವಕೀಲರ ಮೂಲಕ ಅಥವಾ ನೇರವಾಗಿ ನ್ಯಾಯಾಲಯಕ್ಕೆ ಮೌಖಿಕವಾಗಿ ವಿನಂತಿಸಿ ಪ್ರಕರಣವನ್ನು ಲೋಕ ಅದಾಲತ್‌ಗೆ ವರ್ಗಾಯಿಸಿಕೊಳ್ಳಬಹುದು. ಇನ್ನು ನ್ಯಾಯಾಲಯಕ್ಕೆ ಹೋಗದ ‘ವ್ಯಾಜ್ಯ ಪೂರ್ವ’ (Pre-litigation) ಪ್ರಕರಣಗಳಿದ್ದರೆ ಜಿಲ್ಲಾ ಅಥವಾ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಸಾರ್ವಜನಿಕರು, ವಕೀಲರು ಹಾಗೂ ವಿಮಾ ಕಂಪನಿಗಳು ಈ ಜನತಾ ನ್ಯಾಯಾಲಯವನ್ನು ಯಶಸ್ವಿಗೊಳಿಸಲು ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಉಚಿತ ಸಹಾಯವಾಣಿ ಸಂಖ್ಯೆ 15100 ಕ್ಕೆ ಕರೆ ಮಾಡಬಹುದು ಎಂದು ಪ್ರಕಟಣೆ ತಿಳಿಸಿದೆ.





