ಬೆಂಗಳೂರು: ನಾಳೆಯಿಂದ (ಫೆಬ್ರವರಿ 9) ಮೆಟ್ರೋ ದರ ಏರಿಕೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಮನೆಮಾಡಿದೆ. ಸಂಸದ ತೇಜಸ್ವಿ ಸೂರ್ಯ ಅವರು ದರ ಏರಿಕೆಗೆ ತಡೆ ನೀಡಲಾಗಿದೆ ಎಂದು ಹೇಳಿದ್ದರೂ, ಬಿಎಂಆರ್‌ಸಿಎಲ್ ಮಾತ್ರ ಅಧಿಕೃತ ಆದೇಶದ ಪತ್ರಕ್ಕಾಗಿ ಕಾಯುತ್ತಿದೆ.
ತೇಜಸ್ವಿ ಸೂರ್ಯ ಹೇಳಿದ್ದೇನು?
ಶನಿವಾರವಷ್ಟೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಮಹತ್ವದ ಹೇಳಿಕೆ ನೀಡಿದ್ದರು. ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರೊಂದಿಗೆ ಚರ್ಚಿಸಲಾಗಿದ್ದು, ಮೆಟ್ರೋ ದರ ಏರಿಕೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ತಡೆ ನೀಡಿದೆ. ಹೀಗಾಗಿ ಸೋಮವಾರದಿಂದ ದರ ಏರಿಕೆ ಇರುವುದಿಲ್ಲ ಎಂದು ತಿಳಿಸಿದ್ದರು. ಆದರೆ, ಈ ಹೇಳಿಕೆ ಹೊರಬಂದು 24 ಗಂಟೆ ಕಳೆದರೂ ಬಿಎಂಆರ್‌ಸಿಎಲ್ ಕಚೇರಿಗೆ ಯಾವುದೇ ಅಧಿಕೃತ ಇ-ಮೇಲ್ ಅಥವಾ ಪತ್ರ ತಲುಪಿಲ್ಲ.
ಕೇಂದ್ರ ಸರ್ಕಾರದಿಂದ ದರ ಏರಿಕೆ ತಡೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಆದೇಶದ ಪ್ರತಿ ನಮಗೆ ಬಂದಿಲ್ಲ. ಪತ್ರ ಬಾರದೇ ಇದ್ದರೆ ಪೂರ್ವನಿರ್ಧರಿತ ಯೋಜನೆಯಂತೆ ದರ ಏರಿಕೆ ಫಿಕ್ಸ್ ಎಂದು ಬಿಎಂಆರ್‌ಸಿಎಲ್ ಮೂಲಗಳು ಸ್ಪಷ್ಟಪಡಿಸಿವೆ.
ದರ ಏರಿಕೆ ಎಷ್ಟು ಮತ್ತು ಯಾಕೆ ?
ದರ ನಿಗದಿ ಸಮಿತಿ (FFC) ಶಿಫಾರಸಿನಂತೆ ಪ್ರತಿ ವರ್ಷ 5% ರಷ್ಟು ದರ ಹೆಚ್ಚಳ ಮಾಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
-
ಕನಿಷ್ಠ ದರ: 10 ರೂ. ಇದ್ದದ್ದು 11 ರೂ. ಆಗಲಿದೆ.
-
ಗರಿಷ್ಠ ದರ: 90 ರೂ. ಇದ್ದದ್ದು 95 ರೂ. ತಲುಪಲಿದೆ. ನಿರ್ವಹಣಾ ವೆಚ್ಚದ ಕಾರಣ ನೀಡಿ ಈ 1 ರಿಂದ 5 ರೂ.ಗಳ ಏರಿಕೆಯನ್ನು ಸಮರ್ಥಿಸಿಕೊಳ್ಳಲಾಗುತ್ತಿದೆ.
ಕಳೆದ ವರ್ಷ (2025) ಫೆಬ್ರವರಿ 9ರಂದು ಬಿಎಂಆರ್‌ಸಿಎಲ್ ಭಾರೀ ಪ್ರಮಾಣದ ದರ ಏರಿಕೆ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಅಂದು ಶೇ. 101.5 ರಷ್ಟು ದರ ಹೆಚ್ಚಳ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿತ್ತು. ಜನಾಕ್ರೋಶಕ್ಕೆ ಮಣಿದು ನಾಲ್ಕೇ ದಿನಗಳಲ್ಲಿ ದರವನ್ನು ಶೇ. 30 ರಷ್ಟು ಇಳಿಕೆ ಮಾಡಲಾಗಿತ್ತು. ಈಗ ಮತ್ತೆ ದರ ಏರಿಕೆಗೆ ಮುಂದಾಗಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ, ಇಂದಿನ ಮಧ್ಯರಾತ್ರಿಯೊಳಗೆ ಕೇಂದ್ರದಿಂದ ಅಧಿಕೃತ ಪತ್ರ ಬಾರದೇ ಹೋದರೆ, ನಾಳೆ ಮುಂಜಾನೆ ಮೆಟ್ರೋ ಹತ್ತುವ ಪ್ರಯಾಣಿಕರು ಹೆಚ್ಚಿನ ದರ ನೀಡಬೇಕಾದ ಅನಿವಾರ್ಯತೆ ಎದುರಾಗಲಿದೆ.





