ಮೈಸೂರು: ಕುಡಿಯಲು ಹಣ ನೀಡದಿದ್ದಕ್ಕೆ ಮಗನೇ ತಾಯಿಯ ಮನೆಗೆ ಬೆಂಕಿ ಹಚ್ಚಿದ ಆಘಾತಕಾರಿ ಘಟನೆ ಮೈಸೂರಿನ ರಮ್ಮನಹಳ್ಳಿಯಲ್ಲಿ ನಡೆದಿದೆ. ಆರೋಪಿಯಾದ ಶಿವಪ್ರಕಾಶ್ (26) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಮ್ಮನಹಳ್ಳಿಯಲ್ಲಿ ಕಲಾವತಿ ಎಂಬ ಮಹಿಳೆ ಸಣ್ಣ ಅಂಗಡಿಯೊಂದನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಿಗೆ ಇಬ್ಬರು ಮಕ್ಕಳಿದ್ದು, ಶಿವಪ್ರಕಾಶ್ ಇವರ ಎರಡನೇ ಮಗ. ಕಲಾವತಿಯವರ ಪತಿ ಮತ್ತೊಂದು ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಶಿವಪ್ರಕಾಶ್ ಕುಡಿತದ ಚಟಕ್ಕೆ ಒಳಗಾಗಿದ್ದು, ಆಗಾಗ ತಾಯಿಯ ಬಳಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಘಟನೆಗೆ ಎರಡು ದಿನಗಳ ಹಿಂದೆ, ಶಿವಪ್ರಕಾಶ್ ತಾಯಿಯ ಬಳಿ ಕುಡಿಯಲು ಹಣ ಕೇಳಿದ್ದ. ಆದರೆ, ಕಲಾವತಿಯವರು ಹಣ ಇಲ್ಲ ಎಂದು ತಿಳಿಸಿದಾಗ, ಆತ ಕೋಪಗೊಂಡು ತಾಯಿ ಮನೆಯೊಳಗಿರುವಾಗಲೇ ಹೊರಗಿನಿಂದ ಬೆಂಕಿ ಹಚ್ಚಿದ್ದಾನೆ.
ಕಲಾವತಿಯವರು ಮನೆಯೊಳಗೆ ಸಿಲುಕಿಕೊಂಡಿದ್ದು, ಸ್ಥಳೀಯರು ತಕ್ಷಣ ಸ್ಪಂದಿಸಿ ಅವರನ್ನು ರಕ್ಷಿಸಿದ್ದಾರೆ. ಆದರೆ, ಬೆಂಕಿಯಿಂದ ಮನೆಯಲ್ಲಿದ್ದ ಸುಮಾರು 60 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಸಂಪೂರ್ಣವಾಗಿ ಭಸ್ಮವಾಗಿವೆ.. ಸ್ಥಳೀಯರ ದೂರಿನ ಮೇರೆಗೆ, ಪೊಲೀಸರು ಶಿವಪ್ರಕಾಶ್‌ನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.