ಮೈಸೂರು: ಮದುವೆಗೆ ಕೇವಲ ವಾರ ಬಾಕಿಯಿತ್ತು. ಮನೆಯಲ್ಲಿ ಮದುವೆಯ ಸಡಗರವಿತ್ತು. ಮಗಳು ಹಸೆಮಣೆ ಏರಬೇಕಿತ್ತು. ಆದರೆ ಒಬ್ಬ ಯುವಕನ ದುರಾಸೆ ಮತ್ತು ಕಿರುಕುಳದಿಂದಾಗಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಕೆಂಪಯ್ಯನ ಹುಂಡಿ ಗ್ರಾಮದಲ್ಲಿ ನಡೆದಿದೆ. ಡೆತ್‌ನೋಟ್ ಬರೆದಿಟ್ಟು ತಂದೆ ಶಿವಣ್ಣ (54), ತಾಯಿ ನಾಗರತ್ನ (44) ಮತ್ತು ಮಗಳು ರಕ್ಷಿತಾ (21) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮದುವೆ ನಿಶ್ಚಯವಾಗಿತ್ತು
ಮೂರು ತಿಂಗಳ ಹಿಂದೆ ರಕ್ಷಿತಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು. ಈ ತಿಂಗಳ 23 ಮತ್ತು 24ರಂದು ಮದುವೆ ನಿಗದಿಯಾಗಿತ್ತು. ಮದುವೆಯ ಸಿದ್ಧತೆಗಳು ನಡೆಯುತ್ತಿದ್ದು, ಕುಟುಂಬದಲ್ಲಿ ಸಂತೋಷದ ವಾತಾವರಣವಿತ್ತು. ಆದರೆ ಒಂದು ವಾರದ ಹಿಂದೆಯೇ ಈ ಸಂತೋಷಕ್ಕೆ ತೆರೆಬಿದ್ದಿದೆ.
ಉಲ್ಲಾಸ್ ಗೌಡನ ಕಿರುಕುಳ
ಒಂದು ವಾರದ ಹಿಂದೆ, ಉಲ್ಲಾಸ್ ಗೌಡ ಎಂಬ ಯುವಕ ರಕ್ಷಿತಾಳನ್ನು ಪ್ರೀತಿಸುತ್ತಿದ್ದೇನೆ, ಮದುವೆ ಮಾಡಿಕೊಡಿ ಎಂದು ಆಕೆಯ ಪೋಷಕರ ಬಳಿ ಕೇಳಿದ್ದಾನೆ. ಆದರೆ ರಕ್ಷಿತಾಗೆ ಈಗಾಗಲೇ ಮದುವೆ ನಿಶ್ಚಯವಾಗಿದ್ದರಿಂದ ಆಕೆಯ ಪೋಷಕರು ಉಲ್ಲಾಸ್‌ಗೆ ಬೈದು ಬುದ್ಧಿಮಾತು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಉಲ್ಲಾಸ್, ಅಷ್ಟಕ್ಕೂ ನಿಲ್ಲದೇ ಗಲಾಟೆ ಮಾಡಿದ್ದಾನೆ. ಬಳಿಕ ರಾತ್ರಿಯೇ ಗ್ರಾಮದ ಹಿರಿಯರನ್ನು ಸೇರಿಸಿ ನ್ಯಾಯ ಪಂಚಾಯತಿಯನ್ನು ನಡೆಸಲಾಗಿದೆ. ಆದರೂ ಉಲ್ಲಾಸ್ ತನ್ನ ದುರಾಸೆಯನ್ನು ಬಿಡಲಿಲ್ಲ.
ಬ್ಲ್ಯಾಕ್ಮೇಲ್ ಮತ್ತು ಮಾನಸಿಕ ಹಿಂಸೆ
ಇದಕ್ಕೂ ಮುನ್ನ ರಕ್ಷಿತಾ ತನಗೆ ಕಳುಹಿಸಿದ್ದ ಕೆಲವು ಮೆಸೇಜ್‌ಗಳು ಮತ್ತು ಫೋಟೋಗಳನ್ನು ಉಲ್ಲಾಸ್ ಇಟ್ಟುಕೊಂಡಿದ್ದ. ಅವುಗಳನ್ನೇ ಮದುವೆಗೆ ಅಡ್ಡಿಯಾಗುವಂತೆ ದುರುಪಯೋಗಪಡಿಸಿಕೊಂಡು ರಕ್ಷಿತಾಗೆ ನಿರಂತರ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡಿದ್ದಾನೆ. ಇಷ್ಟಕ್ಕೇ ನಿಲ್ಲದೇ, ರಕ್ಷಿತಾಳ ಮದುವೆ ನಿಶ್ಚಯವಾಗಿದ್ದ ಯುವಕನಿಗೆ ಆ ಮೆಸೇಜ್‌ಗಳನ್ನು ಮತ್ತು ಫೋಟೋಗಳನ್ನು ಕಳುಹಿಸಿದ್ದಾನೆ. ಈ ಕಾರಣದಿಂದ ರಕ್ಷಿತಾಳ ಮದುವೆ ಮುರಿದುಬಿದ್ದಿದೆ.
ಡೆತ್ನೋಟ್ ಮತ್ತು ಆತ್ಮಹತ್ಯೆ:
ತಮಗಾದ ಅವಮಾನ ಮತ್ತು ಮಾನಸಿಕ ಆಘಾತವನ್ನು ಸಹಿಸಲಾರದೇ, ಈ ಕುಟುಂಬ ಡೆತ್ನೋಟ್ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದೆ. ಡೆತ್‌ನೋಟ್‌ನಲ್ಲಿ ತಮ್ಮ ಮೂವರ ಸಾವಿಗೆ ಉಲ್ಲಾಸ್ ಗೌಡನೇ ಕಾರಣ ಎಂದು ಸ್ಪಷ್ಟವಾಗಿ ಬರೆದಿಟ್ಟಿದ್ದಾರೆ. ವಿಷ ಸೇವಿಸಿದ ಮೂವರು ಸೋಮವಾರ ಬೆಳಿಗ್ಗೆ ಮೃತಪಟ್ಟಿರುವುದು ಕಂಡುಬಂದಿದೆ.
ಪೊಲೀಸ್ ತನಿಖೆ:
ಘಟನೆಯ ಬಗ್ಗೆ ಮಾಹಿತಿ ತಿಳಿದು ವರುಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡೆತ್‌ನೋಟ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಮ್ಮಿಬ್ಬರ ಮಗಳು ರಕ್ಷಿತಾಗೆ ಮದುವೆ ನಿಶ್ಚಯವಾಗಿತ್ತು. ಉಲ್ಲಾಸ್ ಗೌಡ ತಪ್ಪು ಆರೋಪದ ಮೇಲೆ ಫೋಟೋ ಹಾಗೂ ಮೆಸೇಜ್‌ಗಳನ್ನು ಹಬ್ಬಿಸಿದ್ದಾನೆ. ಅವನಿಂದಾಗಿ ಮದುವೆ ನಿಂತು, ನಮ್ಮ ಕುಟುಂಬಕ್ಕೆ ಅವಮಾನವಾಯಿತು. ನಮ್ಮ ಸಾವಿಗೆ ಉಲ್ಲಾಸ್ ಗೌಡನೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಆಕೆಯ ಪೋಷಕರು ಬರೆದಿದ್ದಾರೆ.
