ಮೈಸೂರು: ನವರಾತ್ರಿಯ ಒಂಬತ್ತು ದಿನಗಳ ನಂತರ ಇಂದು (ಅ.2, 2025) ವಿಜಯದಶಮಿಯ ಸಂಭ್ರಮ ಅರಮನೆನಗರಿಯಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ನಾಡಹಬ್ಬ ದಸರಾ 2025ರ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಲಕ್ಷಾಂತರ ಜನತೆ ಈ ವೈಭವಭರಿತ ನಾಡಹಬ್ಬಕ್ಕೆ ಸಾಕ್ಷಿಯಾಗಲು ಕಾತರರಾಗಿದ್ದಾರೆ.
ಜಿಲ್ಲಾ ಆಡಳಿತವು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದು, ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ. ಮಧ್ಯಾಹ್ನ 1:00ರಿಂದ 1:18ರವರೆಗಿನ ಧನುರ್ ಲಗ್ನ ಸಮಯದಲ್ಲಿ, ಮೈಸೂರು ಅರಮನೆಯ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಇದು ದಸರಾ ಸಂಭ್ರಮದ ಆರಂಭೋತ್ಸವವಾಗಿದ್ದು, ರಾಜ್ಯದ ಗಣ್ಯಾತಿಗಣ್ಯರು ಭಾಗವಹಿಸುತ್ತಾರೆ.
ಪ್ರಮುಖ ಭಾಗವಾದ ಜಂಬೂ ಸವಾರಿಗೆ ಸಂಜೆ 4:42ರಿಂದ 5:16ರವರೆಗಿನ ಕುಂಭ ಲಗ್ನ ಸಮಯದಲ್ಲಿ ಚಾಲನೆ ನೀಡಲಾಗುತ್ತದೆ. ಈ ಬಾರಿ ಕ್ಯಾಪ್ಟನ್ ಅಭಿಮನ್ಯು ಆರನೇ ಬಾರಿ ಜಂಬೂ ಸವಾರಿಯಲ್ಲಿ ಭಾಗವಹಿಸಲು ಸಜ್ಜಾಗಿದ್ದಾನೆ. ಅಭಿಮನ್ಯುವಿಗೆ ಸಹಾಯಕರಾಗಿ ಕಾವೇರಿ ಮತ್ತು ರೂಪಾ ಕುಮ್ಕಿ ಆನೆಗಳಾಗಿ ಸಾಧ್ ನೀಡಲಿವೆ. ನಿಶಾನೆ ಆನೆಯಾಗಿ ಧನಂಜಯ ಮತ್ತು ನೌಪತ್ ಆನೆಯಾಗಿ ಗೋಪಿ ಮುನ್ನಡೆಯಲಿದೆ.
ಈ ವೈಭವಯುತ ಅಂಬಾರಿ ಮೆರವಣಿಗೆಯಲ್ಲಿ 150 ಮಹಿಳೆಯರು ಕಳಶಗಳನ್ನು ಹೊತ್ತು ಪಾಲ್ಗೊಳ್ಳಲಿದ್ದಾರೆ. ವಿವಿಧ ಕಲಾ ತಂಡಗಳು ಐತಿಹ್ಯಮಯ ನೃತ್ಯ, ಸಂಗೀತ ಮತ್ತು ಕ್ರೀಡೆಗಳ ಪ್ರದರ್ಶನ ನೀಡಲಿದ್ದು, ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ವಡೇಯಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು ಸೇರಿದಂತೆ ಗಣ್ಯರು ಈ ಮೆರವಣಿಗೆಗೆ ಚಾಲನೆ ನೀಡುತ್ತಾರೆ. ವಿಶೇಷವಾಗಿ, ಸಿದ್ದರಾಮಯ್ಯ ಅವರು ಎಂಟನೇ ಬಾರಿಗೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡುವ ಮೂಲಕ, ಅತಿ ಹೆಚ್ಚಿನ ಬಾರಿ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೀರ್ತಿಗೆ ಭಾಜನರಾಗುತ್ತಾರೆ.
ಈ ಬಾರಿಯ ಮೆರವಣಿಗೆಯಲ್ಲಿ 58 ಸ್ಥಬ್ಧ ಚಿತ್ರಗಳು, 125ಕ್ಕೂ ಹೆಚ್ಚು ಕಲಾ ತಂಡಗಳು, 14 ಆನೆಗಳು ಮತ್ತು ಅಶ್ವಾರೋಹಿ ಪಡೆಗಳು ಭಾಗವಹಿಸುತ್ತವೆ. ಈ ಸ್ತಬ್ಧ ಚಿತ್ರಗಳು ಮನಸೆಳೆಯುವಂತಹ ಐತಿಹಾಸಿಕ ಮತ್ತು ಸಾಂಸ್ಕೃತಿಕ ದೃಶ್ಯಗಳನ್ನು ಪ್ರದರ್ಶಿಸುತ್ತವೆ. ಹೆಚ್ಚುವರಿಯಾಗಿ, ಮೈಸೂರು ದಸರಾದ ಡೋನ್ ಪ್ರದರ್ಶನ ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾಗಿದ್ದು, ಈ ಹಬ್ಬದ ಮಹತ್ವವನ್ನು ಹೆಚ್ಚಿಸುತ್ತದೆ.
ಭದ್ರತೆಯ ದೃಷ್ಟಿಯಿಂದ ಇಬ್ಬರು ಡಿಐಜಿ, 27 ಎಸ್‌ಪಿಗಳು, 989 ಡಿವೈಎಸ್‌ಪಿ, ಎಸ್‌ಸಿಪಿ, ಇನ್‌ಸ್‌ಪೆಕ್ಟರ್‌ಗಳು ಸೇರಿದಂತೆ 4,999 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, 1,500 ಹೋಂ ಗಾರ್ಡ್‌ಗಳು, 10 ಸಿಆರ್‌ಪಿಎಫ್, 33 ಕೆಎಸ್‌ಆರ್‌ಪಿ, 29 ಎಎಸ್‌ಸಿಬಿ, 3 ಬಿಎಸ್‌ಎಫ್, 1 ಗರುಡಾ ಕಮಾಂಡೋ, 1 ಐಎಸ್‌ಡಿ ಮತ್ತು ಸಿಐಇಡಿ ತುಕಡಿಗಳು ಭದ್ರತೆ ಕಾರ್ಯಾಚರಣೆಗೆ ಲಭ್ಯವಾಗಿವೆ. ಡ್ರೋನ್ ಕಣ್ಗಾವಲು ಸಹ ಜಾರಿಯಲ್ಲಿದ್ದು, ಮೆರವಣಿಗೆ ಮಾರ್ಗದಲ್ಲಿ 150 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಈಗಾಗಲೇ ಅಳವಡಿಸಲಾದ 30,614 ಸಿಸಿಟಿವಿ ಕ್ಯಾಮೆರಾಗಳಿಗೆ 200 ಹೆಚ್ಚುವರಿ ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದ್ದು, ಅರಮನೆ ಪ್ರವೇಶ ದ್ವಾರಗಳಲ್ಲಿ ಕಟ್ಟುನಿಟ್ಟು ಬಂದೋಬಸ್ತ್ ಇದೆ. ಗಣ್ಯರು ಮತ್ತು ಸಾರ್ವಜನಿಕರು ಪ್ರವೇಶಿಸುವ ಸ್ಥಳಗಳಲ್ಲಿ ತಪಾಸಣೆ ಕ್ರಮಗಳು ಜಾರಿಯಲ್ಲಿವೆ.
ಜಂಬೂ ಸವಾರಿ ಮುಗಿಯುವ ನಂತರ, ರಾತ್ರಿ 7:00 ಗಂಟೆಗೆ ಬನ್ನಿಮಂಟಪ ಮೈದಾನದಲ್ಲಿ ಪಂಜಿನ ಕವಾಯತು ನಡೆಯಲಿದ್ದು, ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ , ಪಂಜಿನ ಕವಾಯತುವಿನಲ್ಲಿ ಭಾಗವಹಿಸಿ, ಕವಾಯತುಗಾರರಿಗೆ ಗೌರವ ಸಲ್ಲಿಸಲಿದ್ದಾರೆ. ಈ ಕವಾಯತು ದಸರಾ ಸಂಭ್ರಮದ ಕೊನೆಯ ಅಧ್ಯಾಯವಾಗಿ, ನಾಡಿನ ಯೋಧ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.