ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪಘಾತದ ನೋವಿನಲ್ಲಿದ್ದ ವ್ಯಕ್ತಿಯ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡ ಇಬ್ಬರು ವ್ಯಕ್ತಿಗಳು, ಆಸ್ಪತ್ರೆಗೆ ಸೇರಿಸುವ ನಾಟಕವಾಡಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೇ ಲೂಟಿ ಮಾಡಿದ್ದ ಇಬ್ಬರು ಆರೋಪಿಗಳನ್ನ ಮೈಸೂರಿನ ಸಿ.ಇ.ಎನ್ (CEN) ಪೊಲೀಸರು ಬಂಧಿಸಿದ್ದಾರೆ.
ಮೈಸೂರು ತಾಲೂಕಿನ ಕಡಕೊಳ ನಿವಾಸಿಯಾದ ಗಣೇಶ್ ಎಂಬವರು ಕಳೆದ ಡಿಸೆಂಬರ್ 19 ರಂದು ಮಧ್ಯರಾತ್ರಿ ಫ್ಯಾಕ್ಟರಿಯಲ್ಲಿ ಕೆಲಸ ಮುಗಿಸಿ ತಮ್ಮ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಕಡಕೊಳದ ಬಳಿ ಅವರ ಬೈಕ್ ಅಪಘಾತಕ್ಕೀಡಾಗಿ ಗಣೇಶ್ ರಸ್ತೆಯ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದು ನೋವಿನಿಂದ ಕಿರುಚುತ್ತಿದ್ದ ಗಣೇಶ್ ಅವರ ಬಳಿಗೆ ಸಹಾಯ ಮಾಡುವ ನೆಪದಲ್ಲಿ ರಮೇಶ್ ಮತ್ತು ಮನು ಎಂಬುವವರು ಬಂದಿದ್ದಾರೆ.
ಗಾಯಾಳು ಗಣೇಶ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಬದಲು, ಆರೋಪಿಗಳಾದ ರಮೇಶ್ ಮತ್ತು ಮನು ಅವರ ಮೊಬೈಲ್ ಫೋನ್ ಅನ್ನು ಕೈಗೆತ್ತಿಕೊಂಡಿದ್ದಾರೆ. ಗಣೇಶ್ ನೋವಿನಲ್ಲಿದ್ದದ್ದನ್ನು ಗಮನಿಸಿ ಅವರ ಮೊಬೈಲ್ ಅನ್‌ಲಾಕ್ ಮಾಡಿಸಿ, ಯುಪಿಐ (UPI) ಆಪ್ ಮೂಲಕ ಬರೋಬ್ಬರಿ 80,000 ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಹಣ ವರ್ಗಾವಣೆಯಾದ ಕೂಡಲೇ ಗಣೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಅಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಣೇಶ್ ಅವರ ಸಹೋದರ ಅಂಕನಾಯಕ, ತಕ್ಷಣವೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಗಣೇಶ್ ಅವರ ಬ್ಯಾಂಕ್ ಖಾತೆಯಿಂದ ಹಣ ಕಟ್ ಆಗಿರುವ ಸಂದೇಶ ನೋಡಿದಾಗ ಹಣ ವರ್ಗಾವಣೆಯಾಗಿರುವ ಬಗ್ಗೆ ತಿಳಿದುಬಂದಿದೆ. ಬಳಿಕ ಈ ಕುರಿತು ಮೈಸೂರು ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ತಾಂತ್ರಿಕ ಮಾಹಿತಿಗಳು ಮತ್ತು ಬ್ಯಾಂಕ್ ವರ್ಗಾವಣೆಯ ದಾಖಲೆಗಳನ್ನು ಬೆನ್ನತ್ತಿದ ಪೊಲೀಸರು, ಮೈಸೂರಿನ ಮಹದೇವಪುರ ನಿವಾಸಿಗಳಾದ ರಮೇಶ್ ಮತ್ತು ಮನು ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಲೂಟಿ ಮಾಡಿದ್ದ 80,000 ರೂಪಾಯಿ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಸ್ತುತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪಘಾತವಾದಾಗ ಸಂತ್ರಸ್ತರಿಗೆ ಸಹಾಯ ಮಾಡುವ ನೆಪದಲ್ಲಿ ದೋಚುವ ಇಂತಹ ಕೃತ್ಯಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.





