ಮೈಸೂರು, ಆಗಸ್ಟ್ 2: ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಬೂದಹಳ್ಳಿ ಗ್ರಾಮದಲ್ಲಿ ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ರಾಜೇಶ್ (32), ನಾಗರಾಜ್ ಹಾಗೂ ನಾರಾಯಣ ಎಂದು ಗುರುತಿಸಲಾಗಿದೆ. ಇವರು ಬೂದಹಳ್ಳಿ ಗ್ರಾಮದ ಸಿದ್ದರಾಜು ಅವರಿಗೆ ಸೇರಿದ ಇಟ್ಟಿಗೆಗೂಡಿನಲ್ಲಿ ಕೆಲಸ ಮಾಡುತ್ತಿದ್ದರು. ಮಾಹಿತಿ ಪ್ರಕಾರ, ಸುಡಲು ಹಾಕಿದ್ದ ಇಟ್ಟಿಗೆಗೂಡಿನಲ್ಲಿದ್ದ ಬೆಂಕಿ ಸಂಪೂರ್ಣವಾಗಿ ಆರದಿದ್ದರೂ ಗೂಡನ್ನು ತೆರವುಗೊಳಿಸುವ ಕೆಲಸ ಆರಂಭಿಸಲಾಗಿತ್ತು. ಇದೇ ವೇಳೆ ಏಕಾಏಕಿ ಇಟ್ಟಿಗೆಗೂಡು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಅವಘಡದ ತೀವ್ರತೆಗೆ ರಾಜೇಶ್ ಹಾಗೂ ನಾರಾಯಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಟ್ಟಿಗೆಗೂಡಿನ ಉರಿಯುವ ಬಿಸಿಗೆ ಸಿಲುಕಿ ಇಬ್ಬರೂ ತೀವ್ರ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕ ನಾಗರಾಜ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಮೊದಲು ಟಿ. ನರಸೀಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೂಡ ಮೃತಪಟ್ಟಿದ್ದಾರೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಟಿ. ನರಸೀಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ದುರ್ಘಟನೆ ನಡೆದ ಸ್ಥಳದಲ್ಲಿ ಮೃತ ಕಾರ್ಮಿಕರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ದುಡಿಮೆಗಾಗಿ ತೆರಳಿದ್ದ ಕುಟುಂಬದ ಆಧಾರಸ್ತಂಭರನ್ನು ಕಳೆದುಕೊಂಡಿರುವ ಕುಟುಂಬಗಳು ತೀವ್ರ ದುಃಖದಲ್ಲಿ ಮುಳುಗಿವೆ.
ಮನೆ ಮೇಲೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ದುರ್ಮರಣ
ಶಿವಮೊಗ್ಗ / ತೀರ್ಥಹಳ್ಳಿ, ಆಗಸ್ಟ್ 2 (2026): ಮಲೆನಾಡು ಭಾಗದ ತೀರ್ಥಹಳ್ಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡ ಕುಸಿದು ಮನೆಯ ಮೇಲೆ ಬಿದ್ದ ಪರಿಣಾಮ, ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಮ್ಮಡಿಕೊಪ್ಪ ಕೆರೆ ಸಮೀಪ ಈ ದುರ್ಘಟನೆ ನಡೆದಿದೆ. ಭಾನುವಾರ ಬೆಳಗಿನ ಜಾವ ಈ ಘಟನೆ ನಡೆದಿದ್ದು, ಈ ದುರಂತದಲ್ಲಿ ದಂಪತಿ ಹಾಗೂ ಅವರ ನಾಲ್ಕು ವರ್ಷದ ಮಗು ಸಾವನ್ನಪ್ಪಿದ್ದಾರೆ..
ಮೃತರನ್ನು ಮಲ್ಲಿಕಾರ್ಜುನ (30), ಅವರ ಪತ್ನಿ ನಾಗವೇಣಿ (25) ಹಾಗೂ ಪುತ್ರ ಸಂತೋಷ್ (4) ಎಂದು ಗುರುತಿಸಲಾಗಿದೆ. ಕುಟುಂಬದ ಸದಸ್ಯರು ರಾತ್ರಿ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ, ನಿರಂತರ ಮಳೆಯಿಂದ ಸಡಿಲಗೊಂಡಿದ್ದ ಗುಡ್ಡ ಏಕಾಏಕಿ ಕುಸಿದು ಮನೆ ಮೇಲೆ ಬಿದ್ದಿದೆ. ಕ್ಷಣಾರ್ಧದಲ್ಲೇ ಮನೆ ಸಂಪೂರ್ಣ ಮಣ್ಣಿನಡಿ ಹೂತು ಹೋಗಿದ್ದು, ಒಳಗಿದ್ದವರಿಗೆ ಹೊರಬರುವ ಅವಕಾಶವೇ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಆರಂಭಿಸಿದರು. ಆದರೆ ಅಪಾರ ಪ್ರಮಾಣದ ಮಣ್ಣು, ಬಂಡೆಗಳು ಹಾಗೂ ಮರಗಳು ಮನೆ ಮೇಲೆ ಬಿದ್ದಿದೆ. ಬಳಿಕ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಬಿ ಯಂತ್ರಗಳ ಸಹಾಯದಿಂದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ಭಾರೀ ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಮಣ್ಣಿನಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲು ಸಾಕಷ್ಟು ಸಮಯ ಬೇಕಾಯಿತು. ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಈ ಘಟನೆ ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಹಲವು ದಿನಗಳಿಂದ ಶಿವಮೊಗ್ಗ ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ನದಿ-ಹೊಳೆಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಬೆಟ್ಟಗುಡ್ಡಗಳ ತಪ್ಪಲಿನಲ್ಲಿ ವಾಸಿಸುವ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಣ್ಣು ಸಂಪೂರ್ಣ ಸಡಿಲಗೊಂಡಿರುವುದರಿಂದ ಇನ್ನಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆ ತಾಲೂಕು ಆಡಳಿತ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಹಾಗೂ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಆರಂಭಿಸಿದೆ. ಸಾರ್ವಜನಿಕರು ಅನಗತ್ಯವಾಗಿ ಗುಡ್ಡ ಪ್ರದೇಶಗಳಿಗೆ ತೆರಳಬಾರದು ಹಾಗೂ ಅಧಿಕಾರಿಗಳ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
