ಬೆಂಗಳೂರು: ಮೈಸೂರು ಸ್ಯಾಂಡಲ್ ಸೋಪ್‌ನ ಹೊಸ ಬ್ರಾಂಡ್ ಅಂಬಾಸಿಡರ್ ಆಗಿ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಕರ್ನಾಟಕದ ಪ್ರತಿಷ್ಠಿತ ಉತ್ಪನ್ನಕ್ಕೆ ಕನ್ನಡ ನಟಿಯರನ್ನೇ ಆಯ್ಕೆ ಮಾಡಬೇಕೆಂದು ಜನರು ಆಗ್ರಹಿಸಿದ್ದಾರೆ. ಈ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ ನೀಡಿದ್ದು, ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಸೇರಿದಂತೆ ಕನ್ನಡ ನಟಿಯರನ್ನು ಸಂಪರ್ಕಿಸಿದ್ದೇವೆ, ಆದರೆ ಅವರು ಲಭ್ಯರಿರಲಿಲ್ಲ ಎಂದು ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, “ಮೈಸೂರು ಸ್ಯಾಂಡಲ್ ಸೋಪ್ ಒಂದು ವ್ಯಾಪಾರವಾಗಿದ್ದು, ಇಲ್ಲಿ ಸ್ಪರ್ಧೆ ತೀವ್ರವಾಗಿದೆ. ನಮ್ಮ ಉತ್ಪನ್ನ ಈಗ ಪ್ಯಾನ್-ಇಂಡಿಯಾ ಮಾರುಕಟ್ಟೆಯಲ್ಲಿದ್ದು, ವಿದೇಶಕ್ಕೂ ವಿಸ್ತರಿಸುವ ಯೋಜನೆ ಇದೆ. ರಾಯಭಾರಿಯ ಆಯ್ಕೆಗಾಗಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಎಲ್ಲಾ ಅಂಶಗಳನ್ನು ಪರಿಗಣಿಸಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ,” ಎಂದರು.
ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಪೂಜಾ ಗಾಂಧಿ, ಮತ್ತು ಕಿಯಾರಾ ಅಡ್ವಾಣಿ ಅವರನ್ನು ಸಂಪರ್ಕಿಸಲಾಗಿತ್ತು, ಆದರೆ ಅವರಿಗೆ ಈಗಾಗಲೇ ಇತರ ಕಮಿಟ್‌ಮೆಂಟ್‌ಗಳಿದ್ದವು. “ದೀಪಿಕಾ ಪಡುಕೋಣೆ ನಮ್ಮ ಬಜೆಟ್‌ಗೆ ಒಗ್ಗದವರು, ಹೀಗಾಗಿ ಅವರನ್ನು ಸಂಪರ್ಕಿಸಲಿಲ್ಲ. ಯಾರೇ ರಾಯಭಾರಿಯಾದರೂ ಎರಡು ವರ್ಷ ಒಪ್ಪಂದದಲ್ಲಿ ಲಾಕ್ ಆಗುತ್ತಾರೆ. ಕನ್ನಡಕ್ಕೆ ಅವಮಾನ ಮಾಡುವ ಉದ್ದೇಶ ನಮಗಿಲ್ಲ,” ಎಂದು ಪಾಟೀಲ್ ಸ್ಪಷ್ಟಪಡಿಸಿದರು.
“ನಮ್ಮ ಗುರಿ 5 ಸಾವಿರ ಕೋಟಿ ರೂಪಾಯಿಗಳ ವಹಿವಾಟು ಸಾಧಿಸುವುದು. ಗಲ್ಫ್ ಮತ್ತು ಯುರೋಪಿಯನ್ ದೇಶಗಳಿಗೆ ಉತ್ಪನ್ನ ವಿಸ್ತರಣೆಯಾಗಬೇಕು. ಈಗಾಗಲೇ 23 ಉತ್ಪನ್ನಗಳ ಉತ್ಪಾದನೆ ಮಾಡುತ್ತಿದ್ದೇವೆ. ಕರ್ನಾಟಕದಲ್ಲಿ ಸೋಪ್‌ನ ಪ್ಯಾಕಿಂಗ್‌ನಲ್ಲಿ ಕನ್ನಡ ವಿವರಣೆಯನ್ನು ಆಕರ್ಷಕವಾಗಿ ಇರಿಸುತ್ತೇವೆ, ಆದರೆ ಇತರ ರಾಜ್ಯಗಳಿಗೆ ಕನ್ನಡ ವಿವರಣೆ ಸೇರಿಸುವುದು ವೆಚ್ಚದಾಯಕ ಮತ್ತು ಅನಗತ್ಯ,” ಎಂದು ಅವರು ಹೇಳಿದರು.
ಕೇರಳದ ಕಂಪನಿಯೊಂದು ಮೈಸೂರು ಸ್ಯಾಂಡಲ್ ಸೋಪ್‌ನ ವಿನ್ಯಾಸವನ್ನು ಕಾಪಿ ಮಾಡಿರುವ ಬಗ್ಗೆಯೂ ಮಾತನಾಡಿದ ಸಚಿವರು, “ಈ ವಿಷಯ ನ್ಯಾಯಾಲಯದಲ್ಲಿದೆ. ನಾವು ಕೇಸ್ ಗೆಲ್ಲುವ ವಿಶ್ವಾಸವಿದೆ. ಶೀಘ್ರದಲ್ಲೇ ತೀರ್ಪು ಬರಲಿದೆ,” ಎಂದರು. ಕನ್ನಡದ ಅಸ್ಮಿತೆ ಮತ್ತು ಕಲಾವಿದರ ಬಗ್ಗೆ ಗೌರವವಿದೆ ಎಂದು ಒತ್ತಿಹೇಳಿದ ಅವರು, “ನಾವು ವಚನ ಸಾಹಿತ್ಯದ ಹಿನ್ನೆಲೆಯಿಂದ ಬಂದವರು. ಕನ್ನಡಕ್ಕೆ ನಮ್ಮ ಬದ್ಧತೆ ದೃಢವಾಗಿದೆ,” ಎಂದರು.





