ಲೈಂಗಿಕ ಕಿರುಕುಳ ಆರೋಪ: ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ದೂರು ದಾಖಲು

Untitled design 2025 12 16T114438.159

ಬಾಗಲಕೋಟೆ, ಡಿ.16: ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿರುವ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ (Music Mailari) ವಿರುದ್ಧ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಒಟ್ಟು ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬೆಳಗಾವಿ ಜಿಲ್ಲೆಯ ಮೂಲದ ಮ್ಯೂಸಿಕ್ ಮೈಲಾರಿ, ಅಕ್ಟೋಬರ್ 24ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಪ್ರಯುಕ್ತ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಹಾಡಲು ಆಗಮಿಸಿದ್ದ ಎನ್ನಲಾಗಿದೆ. ಇದೇ ಕಾರ್ಯಕ್ರಮದಲ್ಲಿ ಅಪ್ರಾಪ್ತ ಬಾಲಕಿ ಡ್ಯಾನ್ಸ್ ಮಾಡಲು ಭಾಗವಹಿಸಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕಾರ್ಯಕ್ರಮದ ವೇಳೆ ಬಾಲಕಿಯನ್ನು ನಂಬಿಸಿ, ಲಾಡ್ಜ್‌ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಾಲಕಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾಳೆ. ಅಲ್ಲದೆ, ಅತ್ಯಾಚಾರ ನಡೆಸಿದ ನಂತರ ವಿಡಿಯೋ ಮಾಡಿಕೊಂಡಿದ್ದಾರೆ ಎಂಬುದನ್ನೂ ಬಾಲಕಿ ಆರೋಪಿಸಿದ್ದಾಳೆ. ಈ ಘಟನೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರು ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಘಟನೆಯ ಬಳಿಕ ಬಾಲಕಿ, ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣದ ವ್ಯಾಪ್ತಿ ಮತ್ತು ಸ್ಥಳದ ಆಧಾರದ ಮೇಲೆ, ಡಿಸೆಂಬರ್ 15ರಂದು ಪ್ರಕರಣವನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಸದ್ಯ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಬಾಲಕಿಯ ವೈದ್ಯಕೀಯ ಪರೀಕ್ಷೆ ಹಾಗೂ ಹೇಳಿಕೆ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಪ್ರಕರಣದ ಎಲ್ಲಾ ಆಯಾಮಗಳನ್ನು ಗಂಭೀರವಾಗಿ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮ್ಯೂಸಿಕ್ ಮೈಲಾರಿ ಹಾಡಿರುವ ಹಲವು ಜಾನಪದ ಹಾಡುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದವು. ವಿಶೇಷವಾಗಿ ‘ಬಾಗಲಕೋಟೆ ಬಸ್ ಸ್ಟ್ಯಾಂಡ್ ನಾಗ…’ ಎಂಬ ಹಾಡು ಯೂಟ್ಯೂಬ್, ಇನ್‌ಸ್ಟಾಗ್ರಾಂ ಹಾಗೂ ರೀಲ್ಸ್‌ಗಳಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ಇದೇ ಜನಪ್ರಿಯತೆಯಿಂದ ಮ್ಯೂಸಿಕ್ ಮೈಲಾರಿ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳಿಗೆ ಆಹ್ವಾನ ಪಡೆಯುತ್ತಿದ್ದ ಎನ್ನಲಾಗಿದೆ.

Exit mobile version