ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ಮೊದಲ ಕೇಸ್‌ನಲ್ಲಿ ಚಿತ್ರದುರ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಇಂದು ಶ್ರೀಗಳನ್ನು ಖುಲಾಸೆಗೊಳಿಸಿದೆ. ಜೊತೆಗೆ A2 ಲೇಡಿ ವಾರ್ಡನ್ ರಶ್ಮಿ ಹಾಗೂ A3 ಮಠದ ಮ್ಯಾನೇಜರ್ ಪರಮಶಿವಯ್ಯ ಅವರನ್ನೂ ಕೂಡ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಲಾಗಿದೆ.
ಕೇಸ್ ಖುಲಾಸೆ ಬಳಿಕ ಮುರುಘಾ ಶ್ರೀಗಳ ಮೊದಲ ಪ್ರತಿಕ್ರಿಯೆ
ದಾವಣಗೆರೆಯಲ್ಲಿ ಮಾಧ್ಯಮಗಳನ್ನು ಎದುರಿಸಿದ ಮುರುಘಾ ಶ್ರೀಗಳು ತುಂಬಾ ಸಂಯಮದಿಂದ ಮಾತನಾಡಿದರು.
“ಎಲ್ಲರಿಗೂ ಸಂವಿಧಾನ ದಿನದ ಶುಭಾಶಯಗಳು. ಶೀಘ್ರವೇ ಸುದ್ದಿಗೋಷ್ಠಿ ಕರೆದು ಸವಿವರವಾಗಿ ಮಾತನಾಡುತ್ತೇನೆ. ಈಗ ಆದಷ್ಟೂ ಮೌನವಾಗಿರಲು ಬಯಸುತ್ತೇನೆ. ಈಗ ಮಾತನಾಡುವ ಸಮಯವಲ್ಲ” ಎಂದು ಹೇಳಿದ್ದಾರೆ.
ಪ್ರಕರಣದ ಹಿನ್ನೆಲೆ:
ಪ್ರಕರಣವು 2022ರ ಆಗಸ್ಟ್ 26 ರಂದು ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರು ಸಂತ್ರಸ್ತ ಬಾಲಕಿಯರಿಂದ ದೂರು ಸಲ್ಲಿಸುವುದರೊಂದಿಗೆ ಆರಂಭವಾಯಿತು. ಮುರುಘಾ ಮಠದ ಹಾಸ್ಟೆಲ್‌ನಲ್ಲಿ ನಡೆದ ಲೈಂಗಿಕ ಕಿರುಕುಳದ ಆರೋಪಗಳಿದ್ದು, ಈ ದೂರಿನ ನಂತರ ಆಗಸ್ಟ್ 27 ರಂದು ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು. ಸೆಪ್ಟೆಂಬರ್ 1, 2022 ರಂದು ಪೊಲೀಸರು ಶ್ರೀಗಳನ್ನು ಬಂಧಿಸಿ, ತನಿಖೆ ನಡೆಸಿದ ನಂತರ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಈ ಮಧ್ಯೆ, ನವೆಂಬರ್ 16, 2023 ರಂದು ಕರ್ನಾಟಕ ಹೈಕೋರ್ಟ್‌ನ ಸೂಚನೆಯಂತೆ ಶ್ರೀಗಳಿಗೆ ಜಾಮೀನು ದೊರೆತಿತ್ತು. ಆದರೆ, ಏಪ್ರಿಲ್ 29, 2024 ರಂದು ಸುಪ್ರೀಂ ಕೋರ್ಟ್ ಈ ಜಾಮೀನು ರದ್ದುಗೊಳಿಸಿ, ಮೂರು ತಿಂಗಳಲ್ಲಿ ಸಾಕ್ಷಿಗಳ ವಿಚಾರಣೆ ನಡೆಸಿ ಮುಕ್ತಾಯಗೊಳಿಸುವಂತೆ ಗಡುವು ನೀಡಿತ್ತು. ಈ ಸೂಚನೆಯಂತೆ, ಅಕ್ಟೋಬರ್ 7, 2024 ರಂದು ಮೊದಲ ಕೇಸ್‌ನ ಸಾಕ್ಷಿಗಳ ವಿಚಾರಣೆಯನ್ನು ಕೋರ್ಟ್ ಮುಕ್ತಾಯಗೊಳಿಸಿತು. ಒಟ್ಟು 13 ಸಾಕ್ಷಿಗಳು, ಅವುಗಳಲ್ಲಿ ಇಬ್ಬರು ಸಂತ್ರಸ್ತ ಬಾಲಕಿಯರ ಸಾಕ್ಷ್ಯಗಳು ಸೇರಿದಂತೆ, ವಿಚಾರಣೆಯಲ್ಲಿ ಭಾಗವಹಿಸಿದ್ದರು.
ಇಬ್ಬರು ಸಂತ್ರಸ್ತರ ದೂರುಗಳ ಕುರಿತು ಪ್ರತ್ಯೇಕ ಚಾರ್ಜ್‌ಶೀಟ್ ಸಲ್ಲಿಸಲಾಗಿತ್ತು. ಇಂದಿನ ತೀರ್ಪು ವಿಚಾರಣೆಯಲ್ಲಿ ಸಂತ್ರಸ್ತರ ಪರ ಸರ್ಕಾರಿ ಅಭಿಯೋಜಕ ಎಚ್.ಆರ್. ಜಗದೀಶ್ ವಾದ ಮಂಡಿಸಿದ್ದರು, ತೀರ್ಪುಗಾರ ಪಕ್ಷದಲ್ಲಿ A1 ಶಿವಮೂರ್ತಿ ಮುರುಘಾ ಶರಣರು, A2 ಲೇಡಿ ವಾರ್ಡನ್ ರಶ್ಮಿ ಮತ್ತು A3 ಮಠದ ಮ್ಯಾನೇಜರ್ ಪರಮಶಿವಯ್ಯ ಸೇರಿದಂತೆ ಆರೋಪಿಗಳ ಪರ ಹೈಕೋರ್ಟ್ ಹಿರಿಯ ವಕೀಲ ಸಿ.ವಿ. ನಾಗೇಶ್ ವಾದ ಮಂಡಿಸಿದ್ದರು. ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಜಿ.ಸಿ. ಹಡಪದ ಅವರು ಇಂದು ತೀರ್ಪು ಪ್ರಕಟಿಸಿದರು.





