ಉತ್ತರ ಕರ್ನಾಟಕದ ಖ್ಯಾತ ಯೂಟ್ಯೂಬರ್ ಮುಕಳೆಪ್ಪಾ ಅಲಿಯಾಸ್ ಖ್ವಾಜಾ ಶಿರಹಟ್ಟಿ ಮತ್ತು ಗಾಯಿತ್ರಿ ಜಾಲಿಹಾಳ್ ಅಂತರ್ಧರ್ಮೀಯ ವಿವಾಹ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಲವ್ ಜಿಹಾದ್ ಮಾಡಿಲ್ಲ, ಮತಾಂತರವೂ ಆಗಿಲ್ಲ ಎಂದು ದಂಪತಿ ಹೇಳಿಕೊಂಡಿದ್ದರೂ, ಯುವತಿಯ ತಾಯಿ ಶಿವಕ್ಕ ತಾಳಿ ಮತ್ತು ಕುಂಕುಮದ ಕೊರತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಪಾರ್ಮ್ ನಿವಾಸಿ ಖ್ವಾಜಾ ಶಿರಹಟ್ಟಿ (ಮುಕಳೆಪ್ಪಾ) ಮತ್ತು ಹುಬ್ಬಳ್ಳಿ ನಗರದ ಲೋಹಿಯಾ ನಗರದ 22 ವರ್ಷದ ಗಾಯಿತ್ರಿ ಜಾಲಿಹಾಳ್ ಅವರು ಮೂರು ತಿಂಗಳ ಹಿಂದೆ ಜೂನ್ 5ರಂದು ಮುಂಡಗೋಡದ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಈ ವಿವಾಹಕ್ಕೆ ಲವ್ ಜಿಹಾದ್ ಆರೋಪ ಕೇಳಿಬಂದಿದ್ದು, ಸೆಪ್ಟೆಂಬರ್ 20ರಂದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಯುವತಿಯ ಹೆತ್ತವರು ದೂರು ದಾಖಲಿಸಿದ್ದರು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರೊಂದಿಗೆ ಆಗಮಿಸಿದ್ದ ಯುವತಿಯ ಕುಟುಂಬವು ಖ್ವಾಜಾ ವಿರುದ್ಧ ದೂರು ನೀಡಿತ್ತು.
ಸೆಪ್ಟೆಂಬರ್ 24ರಂದು ಖ್ವಾಜಾ ಮತ್ತು ಗಾಯಿತ್ರಿ ಇಬ್ಬರೂ ವಿಡಿಯೋ ಬಿಡುಗಡೆ ಮಾಡಿ, “ನಾವು ಪರಸ್ಪರ ಮತಾಂತರವಾಗಿಲ್ಲ. ಲವ್ ಜಿಹಾದ್ ಕೂಡ ಮಾಡಿಲ್ಲ. ಮೂರು ವರ್ಷಗಳಿಂದ ಪ್ರೀತಿಸಿ ವಿವಾಹ ಮಾಡಿಕೊಂಡಿದ್ದೇವೆ. ಕಲಾವಿದರಲ್ಲಿ ಜಾತಿ-ಧರ್ಮ ತಾರಾಟಕ್ಕೆ ಇಡೆಯಿಲ್ಲ. ನಮಗೆ ಬದುಕಲು ಬಿಡಿ” ಎಂದು ಮನವಿ ಮಾಡಿದ್ದರು.
ದಂಪತಿಯ ಹೇಳಿಕೆಗೆ ತಾಯಿ ಶಿವಕ್ಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮತಾಂತರ ಆಗಿಲ್ಲ ಎಂದರೆ ಕೊರಳಲ್ಲಿ ನಮ್ಮ ಹಿಂದೂ ಸಂಪ್ರದಾಯದ ತಾಳಿ ಯಾಕಿಲ್ಲ? ಹಣೆಯಲ್ಲಿ ಕುಂಕುಮ ಯಾಕಿಲ್ಲ? ಖ್ವಾಜಾನ ಹೆಸರನ್ನು ಗಾಯಿತ್ರಿ ಕೈಯಲ್ಲಿ ಉರ್ದುವಿನಲ್ಲಿ ಬರೆಸಿಕೊಂಡಿದ್ದಾಳೆ. ಖ್ವಾಜಾ ನನ್ನ ಮಗಳ ತಲೆ ಕೆಡಿಸಿದ್ದಾನೆ. ಇದನ್ನು ನೋಡಿ ಹೆತ್ತುಹೊತ್ತು ಸಾಕಿದ ನಮ್ಮ ಹೊಟ್ಟೆ ಉರಿಯಲ್ವಾ? ಖ್ವಾಜಾ ನನ್ನ ಮಗಳನ್ನು ನಮಗೆ ಬಿಟ್ಟುಬಿಡು, ಇಲ್ಲದಿದ್ದರೆ ಸರಿಯಿರಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆದ ವಿವಾಹಕ್ಕೆ ಸಂಬಂಧಿಸಿದಂತೆ ಲವ್ ಜಿಹಾದ್ ಆರೋಪಗಳು ಕೇಳಿಬಂದಿದ್ದವು. ಆದರೆ, ಗಾಯಿತ್ರಿ ಸ್ವತಃ ಈ ಆರೋಪವನ್ನು ತಳ್ಳಿಹಾಕಿದ್ದಳು. ಈಗ ದಂಪತಿಯ ವಿಡಿಯೋ ಹೇಳಿಕೆಯ ನಂತರ ತಾಯಿಯ ಆಕ್ರೋಶದಿಂದ ಪ್ರಕರಣ ಹೊಸ ತಿರುವು ಪಡೆದಿದೆ. ಸಮಾಜದಲ್ಲಿ ಅಂತರ್ಧರ್ಮೀಯ ವಿವಾಹಗಳ ಸಂವೇದನೀಯ ವಿಷಯವಾಗಿ ಇದು ಚರ್ಚೆಗೆ ಒಳಗಾಗಿದೆ.
ಈ ಪ್ರಕರಣವು ಅಂತರ್ಧರ್ಮೀಯ ವಿವಾಹಗಳು, ಮತಾಂತರ ಮತ್ತು ಹಿಂದೂ ಸಂಪ್ರದಾಯಗಳ ಪಾಲನೆಯ ಬಗ್ಗೆ ಸಾಮಾಜಿಕ ಚರ್ಚೆಯನ್ನು ಉಂಟುಮಾಡಿದೆ. ದಂಪತಿಯ ಮನವಿಗೆ ಬೆಂಬಲ ಸೂಚಿಸುವವರೊಂದಿಗೆ ಕುಟುಂಬದ ಆಕ್ರೋಶವೂ ಸಮಾನಾಂತರವಾಗಿ ಕಂಡುಬರುತ್ತಿದೆ. ಪೊಲೀಸ್ ಇಲಖೆಯು ದೂರಿನ ತನಿಖೆಯನ್ನು ಮುಂದುವರಿಸಿದ್ದು, ಮುಂದಿನ ಘಟನಾವಳಿ ಕಾದುನೋಡಬೇಕು.