ಬೆಂಗಳೂರು/ಮಂಗಳೂರು, ಮಾರ್ಚ್ 16: ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ವಿರುದ್ಧ ಮಹಿಳೆಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ಸಲ್ಲಿಸಿದ್ದಾರೆ. ತನ್ನ ಗಂಡನನ್ನು ಬಂಧಿಸಿ, ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಗಂಡನನ್ನು ಅರೆಸ್ಟ್ ಮಾಡಿ ಕಿರುಕುಳ
ದೂರಿನ ಪ್ರಕಾರ, ಮಹಿಳೆಯ ಪತಿಯನ್ನು ಮೂಡುಬಿದಿರೆ ಠಾಣೆ ಪೊಲೀಸರು ಬಂಧಿಸಿದ್ದರು. ಪತಿಯನ್ನು ಬಿಡುಗಡೆ ಮಾಡುವಂತೆ ಕೇಳಲು ಮಹಿಳೆ ಠಾಣೆಗೆ ತೆರಳಿದಾಗ ಇನ್ಸ್‌ಪೆಕ್ಟರ್ ಸಂದೇಶ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ. “ನನ್ನ ಜೊತೆ ಮಲಗು, ಮಲಗು ಎಂದು ಪೀಡಿಸುತ್ತಿದ್ದ. ಬೇಡ ಅಂದರೆ ರೌಡಿಶೀಟರ್ ತೆರೆಯುವ ಬೆದರಿಕೆ ಹಾಕುತ್ತಿದ್ದ. ಮಾತು ಕೇಳದಿದ್ದರೆ ಹೊಡೆಯುತ್ತಿದ್ದ” ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಗೃಹಸಚಿವರ ಹೆಸರಲ್ಲಿ ಬೆದರಿಕೆ:
ಇನ್ಸ್‌ಪೆಕ್ಟರ್ ಸಂದೇಶ್ ಗೃಹ ಸಚಿವರ ಹೆಸರು ಹೇಳಿ ಮಹಿಳೆಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. “ಸಚಿವರಿಗೆ 50 ಲಕ್ಷ ರೂಪಾಯಿ ಕೊಟ್ಟು ಪೋಸ್ಟಿಂಗ್ ಪಡೆದಿದ್ದೇನೆ. ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ” ಎಂದು ಹೇಳಿ ದುರಹಂಕಾರ ಪ್ರದರ್ಶಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮೇಲಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಿಲ್ಲ
ಮಹಿಳೆ ಈ ಹಿಂದೆ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಗೆ ದೂರು ನೀಡಿದ್ದರು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
20 ಮಹಿಳೆಯರಿಗೆ ಕಿರುಕುಳ
ಮೂಡುಬಿದಿರೆಯಲ್ಲಿ 20ಕ್ಕೂ ಹೆಚ್ಚು ಮಹಿಳೆಯರಿಗೆ ಇನ್ಸ್‌ಪೆಕ್ಟರ್ ಸಂದೇಶ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಇವರು ಮಹಿಳೆಯರ ಮನೆ ಗೇಟ್ ಹಾರಿ ಒಳನುಗ್ಗುತ್ತಿದ್ದರು. ಮಹಿಳೆಯರ ಕೈಹಿಡಿದು ಡ್ಯಾನ್ಸ್ ಮಾಡುತ್ತಿದ್ದರು. ಕಿರುಕುಳಕ್ಕೆ ಒಳಗಾದ ಮಹಿಳೆಯರು ಮಾನ ಭಯದಿಂದ ಮೌನಕ್ಕೆ ಶರಣಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಸಿಪಿ ಶ್ರೀಕಾಂತ್ ವಿರುದ್ಧವೂ ಆರೋಪ
ನೊಂದ ಮಹಿಳೆಯರು ಇನ್ನೊಂದು ಗಂಭೀರ ಆರೋಪವನ್ನು ಮಾಡಿದ್ದಾರೆ. ಎಸಿಪಿ ಶ್ರೀಕಾಂತ್ ಅವರು “ಇಲಾಖೆಯಲ್ಲಿ ಹೆಣ್ಣು ಮಕ್ಕಳನ್ನು ಮಂಚಕ್ಕೆ ಕರೆಯೋದು ಕಾಮನ್” ಎಂದು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.
