ಚಾಮರಾಜನಗರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ಆದರೆ, ಇತ್ತೀಚೆಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಭಕ್ತನೊಬ್ಬ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದರು, ಘಟನೆಯಿಂದ ಭಕ್ತರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ, ಫೆಬ್ರವರಿ 14 ರಿಂದ 18 ರವರೆಗೆ ನಡೆಯುವ ಶಿವರಾತ್ರಿ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ.
ಜಾತ್ರೆಗೆ ಬರುವ ಪಾದಯಾತ್ರಿಗಳ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನವನ್ನು ಬಳಸುತ್ತಿದೆ. ಕಾಡಿನ ದಾರಿಯಲ್ಲಿ ವನ್ಯಮೃಗಗಳ ಚಲನವಲನಗಳನ್ನು ಗುರುತಿಸಲು ಮತ್ತು ಭಕ್ತರು ಅಪಾಯಕಾರಿ ದಾರಿಯಲ್ಲಿ ಸಾಗದಂತೆ ತಡೆಯಲು ಈ ತಂತ್ರಜ್ಞಾನ ಸಹಕಾರಿಯಾಗಿದೆ. ತಾಳಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದವರೆಗಿನ ಸಂಪೂರ್ಣ ಮಾರ್ಗಗಳಲ್ಲಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.
ಭಕ್ತರ ರಕ್ಷಣೆಗಾಗಿ ಒಟ್ಟು 8 ವಿಶೇಷ ತಂಡಗಳನ್ನು ರಚಿಸಲಾಗಿದೆ. ಪ್ರತಿ ಕಿಲೋಮೀಟರ್‌ಗೆ ಒಂದೊಂದು ತಂಡವನ್ನು ನಿಯೋಜಿಸಲಾಗಿದ್ದು, ಪ್ರತಿ ತಂಡಕ್ಕೂ ಬಂದೂಕು, ವಾಕಿಟಾಕಿ, ಪಟಾಕಿ ಮತ್ತು ವಾಹನ ಸೌಲಭ್ಯಗಳನ್ನು ನೀಡಲಾಗಿದೆ. ಅರಣ್ಯ ರಕ್ಷಕರು (DRFO), ಪೊಲೀಸ್ ಸಿಬ್ಬಂದಿ ಮತ್ತು ಎಪಿಸಿ ಕ್ಯಾಂಪ್ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದಾರೆ. ಕಾಡು ಪ್ರಾಣಿಗಳು ಕಂಡರೆ ಪಟಾಕಿ ಸಿಡಿಸಿ ಅವುಗಳನ್ನು ದೂರ ಓಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಪಾದಯಾತ್ರಿಗಳಿಗೆ ಜಿಲ್ಲಾಡಳಿತ ನೀಡಿದ ಪ್ರಮುಖ ಸೂಚನೆಗಳು:
ಜಿಲ್ಲಾಡಳಿತವು ಭಕ್ತರ ಪ್ರಾಣ ರಕ್ಷಣೆಗಾಗಿ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದೆ:
-
ಗುಂಪು ಪ್ರಯಾಣ: ಭಕ್ತರು ಒಬ್ಬೊಬ್ಬರೇ ಕಾಡಿನ ಹಾದಿಯಲ್ಲಿ ಸಾಗಬಾರದು. ಕನಿಷ್ಠ 10-15 ಜನರ ಗುಂಪು ಮಾಡಿಕೊಂಡು ಮಾತ್ರ ಪ್ರಯಾಣಿಸಬೇಕು.
-
ಕಾಡಿನ ಒಳಗೆ ಪ್ರವೇಶ ನಿಷೇಧ: ಮೂತ್ರ ವಿಸರ್ಜನೆ ಅಥವಾ ಬಹಿರ್ದೆಸೆಯ ನೆಪದಲ್ಲಿ ಯಾರೂ ಕಾಡಿನ ಆಳಕ್ಕೆ ಹೋಗುವಂತಿಲ್ಲ. ರಸ್ತೆಯ ಬದಿಯಲ್ಲೇ ಇರಲು ಸೂಚಿಸಲಾಗಿದೆ.
-
ಸಮಯ ಪಾಲನೆ: ರಾತ್ರಿ ವೇಳೆ ಕಾಡಿನ ದಾರಿಯಲ್ಲಿ ಸಂಚರಿಸುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
-
ಅಧಿಕೃತ ಹಾದಿ: ಅರಣ್ಯ ಇಲಾಖೆ ಗುರುತಿಸಿರುವ ಅಧಿಕೃತ ಪಾದಯಾತ್ರೆ ಮಾರ್ಗವನ್ನು ಬಿಟ್ಟು ಬೇರೆ ಕಿರಿದಾದ ದಾರಿಗಳನ್ನು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.
ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯ ಜಂಟಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಶಿವರಾತ್ರಿ ಸಂದರ್ಭದಲ್ಲಿ ಲಕ್ಷಾಂತರ ಜನರು ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಭಾಗಗಳಿಂದ ಆಗಮಿಸುವುದರಿಂದ, ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತವು ‘ಹೈಅಲರ್ಟ್’ ಘೋಷಿಸಿದೆ. ಭಕ್ತರು ಭಯಪಡದೆ, ಇಲಾಖೆಯ ಸೂಚನೆಗಳನ್ನು ಪಾಲಿಸಿ ದೇವರ ದರ್ಶನ ಪಡೆಯುವಂತೆ ಮನವಿ ಮಾಡಲಾಗಿದೆ.
