ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಹಾಗೂ ಬೆಟ್ಟಿಂಗ್ ದಂಧೆ ಪ್ರಕರಣದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿದರ ಬಗ್ಗೆ ಹೇಳಿದ್ದಾರೆ.
ದರ್ಶನ್ ಜೊತೆಗಿನ ಎರಡು ನಿಮಿಷದ ಮಾತುಕತೆ
ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಂದರ್ಭದಲ್ಲಿ ನಟ ದರ್ಶನ್ ಅವರನ್ನು ಭೇಟಿ ಮಾಡಿದ ಬಗ್ಗೆ ಮಾಹಿತಿ ನೀಡಿದ ಶಾಸಕ ವೀರೇಂದ್ರ ಪಪ್ಪಿ, ದರ್ಶನ್ ನನಗೆ ಮೊದಲಿನಿಂದಲೂ ಪರಿಚಿತರು. ನಾಲ್ಕು ತಿಂಗಳ ಅವಧಿಯಲ್ಲಿ ಜೈಲಿನಲ್ಲಿ ಅವರನ್ನು ಒಮ್ಮೆ ಮಾತ್ರ ಭೇಟಿ ಮಾಡಿದ್ದೆ. ಕೇವಲ ಎರಡು ನಿಮಿಷಗಳ ಕಾಲ ಅವರೊಂದಿಗೆ ಮಾತನಾಡಿದ್ದೆ. ಆದರೆ ನಮ್ಮ ಬ್ಯಾರೆಕ್ಗಳು ಬೇರೆ ಬೇರೆಯಾಗಿದ್ದವು. ಅಲ್ಲಿ ಅವರಿಗೆ ಸಿಕ್ಕ ಸೌಲಭ್ಯಗಳ ಬಗ್ಗೆ ಚರ್ಚಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಭೇಟಿ
ಜೈಲಿನಲ್ಲಿದ್ದಾಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದ್ದರು ಹೇಳಿದ ವೀರೇಂದ್ರ ಪಪ್ಪಿ, ಡಿಕೆಶಿ ಅವರು ಜೈಲಿಗೆ ಬಂದಾಗ ಧೈರ್ಯ ತುಂಬಿದರೇ ಹೊರತು ಯಾವುದೇ ದಾಖಲೆಗೆ ಸಹಿ ಹಾಕಿಸಿಕೊಂಡಿಲ್ಲ. ನಾನು ಮೊದಲ ಬಾರಿ ಶಾಸಕನಾಗಿದ್ದೇನೆ, ಹೀಗಾಗಿ ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮ ಜಿಲ್ಲೆಯಲ್ಲಿ ಹಿರಿಯ ನಾಯಕರಿದ್ದಾರೆ, ಅವರಿಗೆ ಅವಕಾಶ ಸಿಗಲಿ ಎಂದು ಸ್ಪಷ್ಟಪಡಿಸಿದರು. ಇಡಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಂಪನಿಯಲ್ಲಿ ಹಣ ಸಿಕ್ಕಿರಬಹುದು ಆದರೆ ಬಿಹಾರ ಚುನಾವಣೆಗೆ ನಾನು ಹಣ ನೀಡಿಲ್ಲ ಎಂದು ಸಮರ್ಥಿಸಿಕೊಂಡರು.
ಬೆಂಬಲಿಗರ ಸಭೆ ಮತ್ತು ಕ್ಷೇತ್ರದ ಅಭಿವೃದ್ಧಿ
ಜೈಲಿನಿಂದ ಹೊರಬರುತ್ತಿದ್ದಂತೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬೆಂಬಲಿಗರ ಸಭೆ ನಡೆಸಿದ ಶಾಸಕರು, ಕ್ಷೇತ್ರದ ಜನರು ನೀಡಿದ ಜವಾಬ್ದಾರಿಯನ್ನು ನಾನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ನಾಲ್ಕು ತಿಂಗಳು ನಿಮ್ಮಿಂದ ದೂರವಿದ್ದಕ್ಕೆ ಕ್ಷಮೆಯಿರಲಿ. ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಕರೆ ನೀಡಿದರು. ಭಾಷಣ ಮಾಡದೆ 4 ತಿಂಗಳಾಗಿದೆ ಎಂದು ಹೇಳುವ ಮೂಲಕ ಹಾಸ್ಯ ಚಟಾಕಿಯನ್ನೂ ಹಾರಿಸಿದರು. ಮುಂದೆ ಶಾಸಕರು ಯಾವ ರೀತಿ ತಮ್ಮ ಕ್ಷೇತ್ರ ಅಭಿವೃದ್ದಿಗೊಳಿಸುತ್ತಾರೆ ಹಾಗೂ ಈಗ ತಾನೆ ಜೈಲಿನಿಂದ ಬಂದಿರುವ ಅವರಿಗೆ ಚಿತ್ರದುರ್ಗದ ಜನ ಹೇಗೆ ಸ್ಪಂದಿಸುತ್ತಾರೆ ಎಂದು ಕಾದು ನೋಡಬೇಕಿದೆ.





