ಸಚಿವ ಡಿ. ಸುಧಾಕರ್ ಆರೋಗ್ಯ ಸ್ಥಿತಿ ಗಂಭೀರ

Untitled design 2026 04 23T232237.839

ಬೆಂಗಳೂರು (ಏಪ್ರಿಲ್ 23): ಕರ್ನಾಟಕದ ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವರಾದ ಡಿ ಸುಧಾಕರ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಅವರ ಆರೋಗ್ಯದಲ್ಲಿ ಇನ್ನೂ ಸುಧಾರಣೆ ಕಂಡುಬಂದಿಲ್ಲ. ಸದ್ಯ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೊಣಕಾಲಿನ ಶಸ್ತ್ರಚಿಕಿತ್ಸೆ ಬಳಿಕ ಶ್ವಾಸಕೋಶ ಸೋಂಕು
ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿ ಸುಧಾಕರ್ ಅವರು ಮೊಣಕಾಲಿನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿತ್ತು. ಆದರೆ, ಶಸ್ತ್ರಚಿಕಿತ್ಸೆಯ ನಂತರ ಅವರ ಶ್ವಾಸಕೋಶದಲ್ಲಿ ತೀವ್ರ ಸೋಂಕು ಉಂಟಾಗಿತ್ತು. ಪರಿಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆ ಅವರನ್ನು ಮೊದಲು ಮಣಿಪಾಲ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣಿಸದ ಕಾರಣ, ಎರಡು ದಿನಗಳ ಹಿಂದೆ ಅವರನ್ನು ಬೆಂಗಳೂರಿನ ಕೆಂಪೇಗೌಡ ಮೆಡಿಕಲ್ ಸೈನ್ಸಸ್ ಆಸ್ಪತ್ರೆ (KIMS) ಗೆ ಸ್ಥಳಾಂತರಿಸಲಾಯಿತು. ಅಲ್ಲಿಯೂ ತೀವ್ರ ನಿಗಾ ಘಟಕದಲ್ಲಿಯೇ ಚಿಕಿತ್ಸೆ ಮುಂದುವರಿದಿದೆ.

ಚಿಕಿತ್ಸೆ ವಿವರ ಮತ್ತು ವೈದ್ಯರ ಹೇಳಿಕೆ
ಆಸ್ಪತ್ರೆಯ ಮೂಲಗಳ ಪ್ರಕಾರ, ಸಚಿವ ಡಿ ಸುಧಾಕರ್ ಅವರು ಶ್ವಾಸಕೋಶದ ಸೋಂಕಿನೊಂದಿಗೆ ಉಸಿರಾಟದ ತೊಂದರೆಯನ್ನೂ ಎದುರಿಸುತ್ತಿದ್ದಾರೆ ಎನ್ನಲಾಗಿದೆ. ಅವರಿಗೆ ಆಮ್ಲಜನಕ ನೆರವು (oxygen support) ನೀಡಲಾಗುತ್ತಿದೆ. ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಆದ್ದರಿಂದ, ವೈದ್ಯರ ತಂಡವೊಂದು ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮುಂದಿನ 24 ರಿಂದ 48 ಗಂಟೆಗಳು ನಿರ್ಣಾಯಕವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಸಚಿವರ ಕುಟುಂಬಸ್ಥರು ಮತ್ತು ಹಿರಿಯ ಅಧಿಕಾರಿಗಳು ಆಸ್ಪತ್ರೆಯಲ್ಲಿಯೇ ತಂಗಿದ್ದಾರೆ.

ರಾಜಕೀಯ ವೃತ್ತಿ ಮತ್ತು ಪ್ರತಿಕ್ರಿಯೆ
ಡಿ ಸುಧಾಕರ್ ಅವರು ಹಿರಿಯೂರು ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದಕ್ಕೂ ಮುನ್ನ 2004ರಲ್ಲಿ ಚಳ್ಳಕೆರೆ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು. ಸರ್ಕಾರದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಜೊತೆಗೆ ಚಿತ್ರದುರ್ಗ ಜಿಲ್ಲಾ ಉಸ್ತುವಾರಿಯ ಹೊಣೆ ಇದೆ. 

 

Exit mobile version