ಅನನ್ಯಾ ಭಟ್ ನಾಪತ್ತೆ ಕೇಸ್: ಸುಜಾತಾ ಭಟ್‌ಗೆ ಎಸ್‌ಐಟಿಯಿಂದ ನಾಲ್ಕನೇ ದಿನವೂ ವಿಚಾರಣೆ

Untitled design 2025 08 29t100820.191

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿರುವ ಅನನ್ಯಾ ಭಟ್ ನಾಪತ್ತೆ ಪ್ರಕರಣವು ರಾಜ್ಯದಾದ್ಯಂತ ಭಾರೀ ಕುತೂಹಲ ಮೂಡಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯನ್ನು ಮುಂದುವರೆಸಿದ್ದು, ಸುಜಾತಾ ಭಟ್‌ ಅವರನ್ನು ಇಂದು ನಾಲ್ಕನೇ ದಿನವೂ ವಿಚಾರಣೆಗೆ ಕರೆಯಲಾಗಿದೆ.

ಸುಜಾತಾ ಭಟ್, ಧರ್ಮಸ್ಥಳದಲ್ಲಿ ತಮ್ಮ ಮಗಳು ಅನನ್ಯಾ ಭಟ್ ಏಕಾಏಕಿ ನಾಪತ್ತೆಯಾಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಆದರೆ, ಎಸ್‌ಐಟಿಗೆ ತನಿಖೆಯ ಜವಾಬ್ದಾರಿ ವಹಿಸುತ್ತಿದ್ದಂತೆ, ಸುಜಾತಾ ಭಟ್ ತಾನು ಯಾವುದೇ ಮಗಳನ್ನು ಹೊಂದಿಲ್ಲ ಎಂದು ಹೇಳಿಕೆ ನೀಡಿದ್ದರು. ತಾನು ದಾಖಲಿಸಿದ್ದ ದೂರು ಸುಳ್ಳು ಎಂದು ಒಪ್ಪಿಕೊಂಡ ಅವರು, ಕೆಲವರು ತಮ್ಮ ಮೇಲೆ ಹಲ್ಲೆ ನಡೆಸಿ, ಬೆದರಿಕೆ ಹಾಕಿ ಈ ರೀತಿ ಹೇಳುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದರು.

ಕಳೆದ ಮೂರು ದಿನಗಳಿಂದ ಎಸ್‌ಐಟಿ ಅಧಿಕಾರಿಗಳು ಸುಜಾತಾ ಭಟ್‌ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಿನ್ನೆ ರಾತ್ರಿ 10 ಗಂಟೆಯವರೆಗೂ ವಿಚಾರಣೆ ನಡೆದಿದ್ದು, ಬಳಿಕ ಸುಜಾತಾ ಭಟ್ ಉಜಿರೆಯ ಒಂದು ಲಾಡ್ಜ್‌ಗೆ ಆಟೋ ರಿಕ್ಷಾದಲ್ಲಿ ತೆರಳಿದ್ದಾರೆ ಎಂದು ಮಾಹಿತಿ ದೊರೆತಿದೆ. ಇಂದು ಕೂಡ ಬೆಳ್ತಂಗಡಿಯ ಎಸ್‌ಐಟಿ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

Exit mobile version