ಬೆಂಗಳೂರು: ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ದುರ್ಘಟನೆಯೊಂದು ನಡೆದಿದ್ದು, ಪ್ರಯಾಣಿಕರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಇಂದು ಬೆಳಗ್ಗೆ ಸುಮಾರು 8:15ರ ವೇಳೆಗೆ ನೇರಳ ಮಾರ್ಗದಲ್ಲಿ ಒಬ್ಬ ವ್ಯಕ್ತಿ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಸಂಭವಿಸಿದ ಕೂಡಲೇ ನಿಲ್ದಾಣ ಸಿಬ್ಬಂದಿ ಹಾಗೂ ರಕ್ಷಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ಮೆಟ್ರೋ ಸಂಚಾರವನ್ನು ನಿಲ್ಲಿಸಲಾಗಿದೆ.
ಘಟನೆಯ ಬಗ್ಗೆ ತಿಳಿದ ತಕ್ಷಣ ಬಿಂಎಂಆರ್‌ಸಿಎಲ್ ಅಧಿಕಾರಿಗಳು ಪೊಲೀಸರು ಆಗಮಿಸುವವರೆಗೆ ಸ್ಥಳವನ್ನು ಸಂಪೂರ್ಣವಾಗಿ ಸೀಲ್ ಮಾಡಿ ಕ್ರಮ ಕೈಗೊಂಡಿದ್ದಾರೆ. ತನಿಖೆ ನಡೆಸಲು ಕೆಂಗೇರಿ ಟ್ರಾಫಿಕ್ ಪೊಲೀಸ್ ಹಾಗೂ ರೈಲು ಪೊಲೀಸ್ ತಂಡಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ಇನ್ನು ಯಾವುದೇ ವಿವರಗಳು ಲಭ್ಯವಾಗಲಿಲ್ಲ. ವ್ಯಕ್ತಿಯ ಗುರುತು, ಆತ್ಮಹತ್ಯೆಗೆ ಕಾರಣ ಸೇರಿದಂತೆ ಎಲ್ಲಾ ವಿಚಾರಗಳು ತನಿಖೆಯ ನಂತರ ತಿಳಿಯಬೇಕಿದೆ.
ಈ ಘಟನೆಯ ಪರಿಣಾಮ ನೇರಳ ಮಾರ್ಗದ ಸಂಚಾರಕ್ಕೆ ಅಡ್ಡಿಯಾಗಿದೆ. ಕೆಂಗೇರಿ–ಚೆಲ್ಲಘಟ್ಟ ನಡುವೆ ಮೆಟ್ರೋ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಮೈಸೂರು ರಸ್ತೆ–ಚೆಲ್ಲಘಟ್ಟವರೆಗೆ ಪ್ರಯಾಣಿಸುವ ಸಾಮಾನ್ಯ ಪ್ರಯಾಣಿಕರಿಗೆ ಕೆಲವು ಗಂಟೆಗಳ ಕಾಲ ಪರ್ಯಾಯ ವ್ಯವಸ್ಥೆಗಳು ಲಭ್ಯವಿದ್ದರೂ, ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಮೈಸೂರು ರಸ್ತೆ ನಿಲ್ದಾಣದಿಂದ ವೈಟ್‌ಫೀಲ್ಡ್ (Kadugodi)ವರೆಗೆ ಮಾತ್ರ ಮೆಟ್ರೋ ಸಂಚಾರವನ್ನು ಮುಂದುವರಿಸಲಾಗಿದೆ ಎಂದು ಬಿಂಎಂಆರ್‌ಸಿಎಲ್ ಪ್ರಕಟಿಸಿದೆ.
ಬೆಳಗಿನ ಸಮಯದಲ್ಲಿ ಬೆಂಗಳೂರಿನ ಪಶ್ಚಿಮ ಭಾಗದಿಂದ ಕಚೇರಿಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಕೆಲವು ಪ್ರಯಾಣಿಕರು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ತೊಂದರೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಂಎಂಆರ್‌ಸಿಎಲ್‌ನ ಅಧಿಕಾರಿಗಳು ಸಾರ್ವಜನಿಕರಿಗೆ ಶಾಂತವಾಗಿರಲು ಮನವಿ ಮಾಡಿದ್ದು, ರಕ್ಷಣಾ ಕಾರ್ಯ ಮುಗಿದ ನಂತರ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ತಿಳಿಸಿದ್ದಾರೆ.
ನಮ್ಮ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ: ಆಸ್ಪತ್ರೆಗೆ ದಾಖಲು
ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಮತ್ತೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ರಾತ್ರಿ 10:20ರ ಸುಮಾರಿಗೆ, ಫ್ಲಾಟ್‌ಫಾರ್ಮ್ ನಂಬರ್ ಒಂದರಲ್ಲಿ ನಿಂತಿದ್ದ 35 ವರ್ಷದ ಒಬ್ಬ ವ್ಯಕ್ತಿ ಮೆಟ್ರೋ ರೈಲು ಬರುವ ಸಮಯದಲ್ಲಿ ಟ್ರ್ಯಾಕ್‌ಗೆ ಜಿಗಿದಿದ್ದಾನೆ. ಈ ಘಟನೆಯಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತುರ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ವಿವರ:
ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದ ನಂತರ, ಸುರಕ್ಷತಾ ಸಿಬ್ಬಂದಿ ಮತ್ತು ಪ್ರಯಾಣಿಕರು ವ್ಯಕ್ತಿಯನ್ನು ರಕ್ಷಿಸಲು ತಕ್ಷಣ ಕಾರ್ಯನಿರ್ವಹಿಸಿದ್ದಾರೆ. ಆದರೆ, ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಘಟನೆಯಿಂದಾಗಿ ಗ್ರೀನ್ ಲೈನ್ ಮೆಟ್ರೋ ಸೇವೆ ಸ್ವಲ್ಪ ಸಮಯದವರೆಗೆ ಅಡ್ಡಿಯಾಗಿತ್ತು. ನಂತರ ಸಂಚಾರ ವ್ಯವಸ್ಥೆಯನ್ನು ಮತ್ತೆ ಸುಗಮಗೊಳಿಸಲಾಯಿತು.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಈ ಘಟನೆಗೆ ಸ್ಪಷ್ಟನೆ ನೀಡಿದೆ. “ಮೆಜೆಸ್ಟಿಕ್ ನಿಲ್ದಾಣದಲ್ಲಿ ಒಬ್ಬ ಪ್ರಯಾಣಿಕ ರೈಲು ಬರುವ ಸಮಯದಲ್ಲಿ ಟ್ರ್ಯಾಕ್‌ಗೆ ಜಿಗಿದಿದ್ದಾರೆ. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಚಾರ ವ್ಯವಸ್ಥೆಯನ್ನು ಮರಳಿ ಸುಗಮಗೊಳಿಸಲಾಗಿದೆ ” ಎಂದು BMRCL ಪ್ರತಿನಿಧಿ ತಿಳಿಸಿದ್ದಾರೆ.
