ನಡು ರಸ್ತೆಯಲ್ಲಿ ಹಾಡುಹಗಲೇ ಯುವಕನ ಬರ್ಬರ ಹತ್ಯೆ

Untitled design 2025 08 11t171632.856

ಬೆಳಗಾವಿ: ಜನಸಂದಣಿ ತುಂಬಿದ್ದ ಸಂತೆಯ ಮಧ್ಯೆ ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.

 ಮೃತನನ್ನು ಹುಕ್ಕೇರಿ ತಾಲೂಕಿನ ಅವರಗೋಳ ಗ್ರಾಮದ 25 ವರ್ಷದ ಮಲ್ಲಿಕ ಹುಸೇನ ಕಿಲ್ಲೇದಾರ (ಮಲಿಕ್ ಕಿಲ್ವೇಧಾರ್) ಎಂದು ಗುರುತಿಸಲಾಗಿದೆ. ಘಟನೆ ವೇಳೆ ಮಲ್ಲಿಕ್ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಆರೋಪಿಗಳು ಅವನ ಮೇಲೆ ದಾಳಿ ನಡೆಸಿ ನಿರ್ದಯವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.

ಘಟನೆ ಹುಕ್ಕೇರಿ ಪಟ್ಟಣದಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ನಡೆದಿದೆ. ಆ ಸಮಯದಲ್ಲಿ ವಾರದ ಸಂತೆ ನಡೆದಿದ್ದು, ರಸ್ತೆ ಜನಸಂದಣಿಯಿಂದ ಕಿಕ್ಕಿರಿದಿತ್ತು. ಬೈಕ್ ಸವಾರನಾಗಿ ಹಾದು ಹೋಗುತ್ತಿದ್ದ ಮಲ್ಲಿಕ್ ಮೇಲೆ ಆರೋಪಿಗಳು ಸಾರ್ವಜನಿಕರ ಕಣ್ಣೆದುರೇ ಮಾರಕಾಸ್ತ್ರಗಳಿಂದ ನಿರಂತರವಾಗಿ ಹಲ್ಲೆ ನಡೆಸಿದರು.

ಹಲ್ಲೆ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಮಲ್ಲಿಕ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಸ್ಥಳೀಯರು ಹಾಗೂ ವ್ಯಾಪಾರಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಹುಕ್ಕೇರಿ ಪೊಲೀಸ್ ಠಾಣೆಯ ಸಿಬ್ಬಂದಿ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಶವವನ್ನು ಪೋಸ್ಟ್‌ಮಾರ್ಟಮ್‌ಗೆ ಕಳುಹಿಸಿದರು.

ಮಲ್ಲಿಕ್ ಹತ್ಯೆಯ ಹಿಂದೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿಯ ಪ್ರಕಾರ, ಹಳೆಯ ವೈಷಮ್ಯ ಅಥವಾ ವೈಯಕ್ತಿಕ ದ್ವೇಷವೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿ, ಆರೋಪಿಗಳ ಪತ್ತೆಗೆ ತೀವ್ರ ಶೋಧ ಆರಂಭಿಸಿದ್ದಾರೆ.

Exit mobile version