RSS ಬ್ಯಾನ್ ಮಾಡೋಕೆ ಪ್ರಿಯಾಂಕ್ ಖರ್ಗೆ ಅಪ್ಪನಿಂದಲೇ ಆಗ್ಲಿಲ್ಲ, ನಿನ್ನಿಂದ ಆಗುತ್ತಾ?: ಯತ್ನಾಳ್ ಟಾಂಗ್

Untitled design (10)

ಮಂಡ್ಯ: ಪ್ರಿಯಾಂಕ್ ಖರ್ಗೆ ಅವರ ಅಪ್ಪನಿಗೇ ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಬ್ಯಾನ್ ಮಾಡಲು ಸಾಧ್ಯವಾಗಲಿಲ್ಲ, ಇನ್ನು ಅವನಿಂದ ಹೇಗೆ ಸಾಧ್ಯ ಎಂದು ಯತ್ನಾಳ್ ಟಾಂಗ್ ಕೊಟ್ಟರು. ಮಂಡ್ಯದಲ್ಲಿ ಮಾತನಾಡಿದ ಅವರು, ಕರ್ನಾಟಕದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ತೀವ್ರವಾಗಿ ಟೀಕಿಸಿದ್ದಾರೆ.

ಯತ್ನಾಳ್ ಅವರು ಪ್ರಿಯಾಂಕ್ ಖರ್ಗೆಯನ್ನು ‘ಶತಮೂರ್ಖ’ ಎಂದು ಕರೆದು, ಅವರ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. “ನೆಹರೂ, ಇಂದಿರಾ ಗಾಂಧಿ ಅವರಂತಹ ಮಹಾನ್ ನಾಯಕರಿಗೇ ಆರ್‌ಎಸ್‌ಎಸ್ ನಿಷೇಧ ಮಾಡಲು ಆಗಲಿಲ್ಲ. ಮುಸ್ಲಿಮರನ್ನು ಖುಷಿಪಡಿಸಲು ಈ ಬಚ್ಚಾ ಏನೇನೋ ಮಾತಾಡುತ್ತಿದ್ದಾನೆ” ಎಂದು ಅವರು ಲೇವಡಿ ಮಾಡಿದರು. ಸೂರ್ಯ ಮತ್ತು ಚಂದ್ರ ಇರುವವರೆಗೂ ಆರ್‌ಎಸ್‌ಎಸ್ ಅಸ್ತಿತ್ವದಲ್ಲಿರುತ್ತದೆ ಎಂದು ಯತ್ನಾಳ್ ಘೋಷಿಸಿದರು.

ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ, ಜತೀಂದ್ರ ಮತ್ತು ಹರಿಪ್ರಸಾದ್ ಅವರನ್ನು ಸಹ ಟೀಕಿಸಿದರು. “ಇವರು ಪಾಕಿಸ್ತಾನ್ ಏಜೆಂಟ್‌ಗಳಂತೆ ಮಾತನಾಡುತ್ತಾರೆ. ಯತೀಂದ್ರ ಏನು ಮಾತಾಡುತ್ತಾನೆ ಎಂಬುದೇ ಗೊತ್ತಾಗುವುದಿಲ್ಲ” ಎಂದು ಅವರು ಹೇಳಿದರು. ಆರ್‌ಎಸ್‌ಎಸ್ ಯಾವುದೇ ಕಬ್ಜಾ ಮಾಡಿಲ್ಲ, ಬದಲಿಗೆ ಶಾಖೆಗಳಲ್ಲಿ ಭಾರತ ಮಾತೆಗೆ ಪ್ರಾರ್ಥನೆ ಮಾಡಿ ಹೋಗುತ್ತಾರೆ ಎಂದು ಯತ್ನಾಳ್ ಸಮರ್ಥಿಸಿಕೊಂಡರು. ಮಸೀದಿಗಳ ಆದಾಯ ಸರ್ಕಾರಕ್ಕೆ ಬರುವುದಿಲ್ಲ ಎಂದು ಹೇಳಿ, ಮುಸ್ಲಿಂ ಸಮುದಾಯದೊಂದಿಗೆ ಹೋಲಿಕೆ ಮಾಡಿದರು. “ಪ್ರಿಯಾಂಕ್ ಖರ್ಗೆ ಇನ್ನು ಎರಡು ವರ್ಷ ಹಾರಾಡಲಿ, ಆಮೇಲೆ ಹಿಂದೂ ಸರ್ಕಾರ ಬರಲಿದೆ” ಎಂದು ಅವರು ಭವಿಷ್ಯ ನುಡಿದರು.

ಇದಲ್ಲದೆ, ಯತ್ನಾಳ್ ಅವರು ಬಿಜೆಪಿ ಒಳಗಿನ ರಾಜಕೀಯದ ಬಗ್ಗೆಯೂ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದೊಂದಿಗೆ ತಮಗೆ ಯಾವುದೇ ಸಂಧಾನವಿಲ್ಲ ಎಂದು ಸ್ಪಷ್ಟಪಡಿಸಿದರು. “ಯಡಿಯೂರಪ್ಪ ಕುಟುಂಬದೊಂದಿಗೆ ನನ್ನ ಸಂಧಾನ ಇಲ್ಲ. ಒಂದಿಬ್ಬರು ಎಂಪಿಗಳನ್ನು ಬಿಟ್ಟರೆ, ಎಲ್ಲರೂ ನನ್ನ ಉಚ್ಚಾಟನೆಗೆ ವಿರೋಧಿಸಿದ್ದಾರೆ” ಎಂದು ಹೇಳಿದರು. ತಮ್ಮ ಉಚ್ಚಾಟನೆ ಬಿಜೆಪಿ ಪಕ್ಷದಿಂದಲೇ ಆಗಿದ್ದು, ಜನರಿಂದಲ್ಲ ಎಂದು ಅವರು ತಿಳಿಸಿದರು. ಹಿಂದೂಗಳ ಮತಗಳ ವಿಭಜನೆ ತಮ್ಮ ಉದ್ದೇಶವಲ್ಲ, ಬದಲಿಗೆ ಹಿಂದೂಗಳ ಸಂಘಟನೆ ಮತ್ತು ಗಟ್ಟಿ ಧ್ವನಿ ಬೇಕು ಎಂದು ಯತ್ನಾಳ್ ಹೇಳಿದರು. ಇದಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಎಂದು ಅವರು ಹೇಳಿದರು.

ರಾಜಕಾರಣದಲ್ಲಿ ಮಾಟಮಂತ್ರ ಮತ್ತು ಆಂತರಿಕ ಷಡ್ಯಂತ್ರಗಳ ಬಗ್ಗೆಯೂ ಯತ್ನಾಳ್ ಮಾತನಾಡಿದರು. “ರಾಜಕಾರಣದಲ್ಲಿ ಮಾಟಮಂತ್ರ ಮಾಡುವವರು ಇದ್ದಾರೆ. ಬಿಜೆಪಿಯಲ್ಲಿ ಒಂದು ಕುಟುಂಬ ಮಾಟಮಂತ್ರ ಮಾಡಿ ನನ್ನನ್ನು ಹಾಳು ಮಾಡಲು ಪೂಜೆ ಮಾಡಿಸುತ್ತದೆ. ಆದರೆ ನನಗೆ ಅದು ತಗುಲುವುದಿಲ್ಲ” ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಹೆಚ್ಚುತ್ತಿದೆ ಎಂದು ಯತ್ನಾಳ್ ಹೇಳಿದರು. “ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವುದು ಸುಲಭವಲ್ಲ. ನವೆಂಬರ್ ಕ್ರಾಂತಿ ಆಗುವುದಿಲ್ಲ” ಎಂದು ಅವರು ಹೇಳಿದರು. ಆದರೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿ ನವೆಂಬರ್ ಕ್ರಾಂತಿ ಸಂಭವಿಸಬಹುದು ಎಂದು ಎಚ್ಚರಿಸಿದರು. ಶಾಸಕರಲ್ಲಿ ಅಸಮಾಧಾನ ಇದ್ದು, ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ ಎಂದು ಅವರು ತಿಳಿಸಿದರು. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯೇ ಕ್ರಾಂತಿ ಎಂದು ಹೇಳಿದರು.

Exit mobile version