“ಅಂಬಲಿ ರಾಶಿಗೆ ಮುತ್ತಿನ ಸಮೃದ್ಧಿಯಾಯ್ತಲೇ”: ಈ ವರ್ಷದ ಭವಿಷ್ಯವಾಣಿ ನುಡಿದ ಮೈಲಾರಲಿಂಗ ಕಾರಣಿಕ

Untitled design 2026 02 02T083705.280

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹರಪನಹಳ್ಳಿಯ ದೊಡ್ಡ ಮೈಲಾರದಲ್ಲಿ ಇರುವ ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಭರತ ಹುಣ್ಣಿಮೆಯಂದು ಈ ವರ್ಷದ ಕಾರಣಿಕ ನುಡಿಯಲ್ಪಟ್ಟಿದ್ದು, ರಾಜ್ಯದ ಜನತೆಗೆ ಸಮೃದ್ಧಿಯ ಆಶಾಕಿರಣ ಮೂಡಿಸಿದೆ. ಪ್ರಾಚೀನ ಸಂಪ್ರದಾಯದಂತೆ ಗೊರವಯ್ಯನ ಮೂಲಕ ನುಡಿಯುವ ಈ ಕಾರಣಿಕವನ್ನು ವರ್ಷಪೂರ್ತಿ ನಡೆಯುವ ಘಟನೆಗಳ ಸೂಚಕ ಭವಿಷ್ಯವಾಣಿಯೆಂದು ಭಕ್ತರು ನಂಬುತ್ತಾರೆ.

ಈ ಬಾರಿ ಗೊರವಪ್ಪನ ಮೂಲಕ ನುಡಿಯಲ್ಪಟ್ಟ ಕಾರಣಿಕ ವಾಕ್ಯ, ‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿಯಾಯ್ತಲೇ ಪರಾಕ್’ ಎಂಬುದಾಗಿದ್ದು, ಇದು ಮಳೆ, ಬೆಳೆ ಹಾಗೂ ಜನಜೀವನದಲ್ಲಿ ಸಮೃದ್ಧಿ ಇರಲಿದೆ ಎಂಬ ಸೂಚನೆ ನೀಡುತ್ತದೆ ಎಂದರ್ಥ.

ಭರತ ಹುಣ್ಣಿಮೆಯಂದು ಬೆಳಗಿನ ಜಾವದಿಂದಲೇ ಸಾವಿರಾರು ಭಕ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು. ಸಂಪ್ರದಾಯದಂತೆ ಗೊರವಯ್ಯ ಬಿಲ್ಲನ್ನೇರಿ ದೇವಾಲಯದ ಗೋಪುರದತ್ತ ದೃಷ್ಟಿ ನೆಟ್ಟುಗೊಂಡು, ಭಕ್ತರ ಜಯಘೋಷದ ನಡುವೆ ಈ ವರ್ಷದ ಕಾರಣಿಕವನ್ನು ಘೋಷಿಸಿದರು. ಈ ಸಂದರ್ಭದಲ್ಲಿ “ಪರಾಕ್… ಪರಾಕ್…” ಎಂಬ ಭಕ್ತರ ಘೋಷಣೆಗಳು ದೇವಾಲಯದ ಆವರಣವನ್ನು ಪ್ರತಿಧ್ವನಿಸಿತು.

ಮೈಲಾರಲಿಂಗೇಶ್ವರ ದೇವಾಲಯದಲ್ಲಿ ನುಡಿಯುವ ಕಾರಣಿಕಕ್ಕೆ ಶತಮಾನಗಳ ಇತಿಹಾಸವಿದ್ದು, ಪ್ರತಿ ವರ್ಷ ಭರತ ಹುಣ್ಣಿಮೆಯಂದು ನುಡಿಯುವ ಈ ವಾಕ್ಯವನ್ನು ರಾಜ್ಯದ ರೈತರು, ಜ್ಯೋತಿಷಿಗಳು ಹಾಗೂ ಜನಸಾಮಾನ್ಯರು ವಿವಿಧ ಅರ್ಥಗಳಲ್ಲಿ ವಿಶ್ಲೇಷಿಸುತ್ತಾರೆ. ವಿಶೇಷವಾಗಿ ಮಳೆ, ಕೃಷಿ, ಆರ್ಥಿಕ ಸ್ಥಿತಿ, ಪ್ರಕೃತಿ ವೈಪರೀತ್ಯಗಳು ಹಾಗೂ ಸಾಮಾಜಿಕ ಸ್ಥಿತಿಗತಿಗಳ ಕುರಿತು ಕಾರಣಿಕ ಮಹತ್ವದ ಸೂಚನೆ ನೀಡುತ್ತದೆ ಎನ್ನುವ ನಂಬಿಕೆ ಇದೆ.

ಈ ಬಾರಿ ನುಡಿಯಲಾದ ಕಾರಣಿಕದಲ್ಲಿ ‘ಅಂಬಲಿ ರಾಶಿ’ ಎಂಬ ಪದ ಬಳಕೆಯಾಗಿದೆ. ಇದನ್ನು ಕೆಲವರು ಆಹಾರ ಧಾನ್ಯಗಳ ಸಮೃದ್ಧಿ, ಅನ್ನಪೂರ್ಣತೆ ಮತ್ತು ರೈತರಿಗೆ ಲಾಭಕರ ವರ್ಷವೆಂದು ಅರ್ಥೈಸುತ್ತಿದ್ದಾರೆ. ‘ಮುತ್ತಿನ ಗಿಣಿ’ ಎನ್ನುವುದು  ಶುಭ ಸೂಚಕವಾಗಿದ್ದು, ಜನಜೀವನದಲ್ಲಿ ಸಂತೃಪ್ತಿ, ಶಾಂತಿ ಹಾಗೂ ಆರ್ಥಿಕ ಸುಧಾರಣೆ ಸಾಧ್ಯವೆಂಬ ಸಂದೇಶವನ್ನು ನೀಡುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಕಾರಣಿಕ ನುಡಿಯ ನಂತರ ವಿಶೇಷ ಪೂಜೆಗಳು, ಹರಕೆ ಸೇವೆಗಳು ನಡೆಯಿತು. ಭಕ್ತರು ದೇವರಿಗೆ ಅನ್ನದಾನ, ತೆಂಗಿನಕಾಯಿ, ಹೂವಿನ ಅರ್ಪಣೆ ಸಲ್ಲಿಸಿ ಕುಟುಂಬದ ಸುಖ-ಶಾಂತಿ, ಉತ್ತಮ ಮಳೆ ಹಾಗೂ ಬೆಳೆಗಾಗಿ ಪ್ರಾರ್ಥಿಸಿದರು. ದೇವಾಲಯದ ಸುತ್ತಮುತ್ತ ವ್ಯಾಪಾರ ಚಟುವಟಿಕೆಗಳು ಜೋರಾಗಿದ್ದು, ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

Exit mobile version