ಟಾಲಿವುಡ್‌ನ ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಕುಟುಂಬದಲ್ಲಿ ಸಂಭ್ರಮ ಮನೆಮಾಡಿದೆ. ನಟ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಡು ಮಗು ಹಾಗೂ ಒಂದು ಹೆಣ್ಣು ಮಗು ಜನಿಸಿರುವುದು ಮೆಗಾ ಕುಟುಂಬಕ್ಕೆ ಸಂತೋಷ ತಂದಿದೆ. ಈ ಸಿಹಿ ಸುದ್ದಿಯನ್ನು ಮೆಗಾ ಸ್ಟಾರ್ ಚಿರಂಜೀವಿ ಅವರು ಅಧಿಕೃತವಾಗಿ ಖಚಿತಪಡಿಸಿದ್ದು, ಅಭಿಮಾನಿಗಳು ಹಾಗೂ ಸಿನಿರಂಗದ ಗಣ್ಯರು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.
ಚಿರಂಜೀವಿ ಅವರು ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯ ಮೂಲಕ ಈ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ. “ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ ಅವಳಿ ಮಕ್ಕಳು ಜನಿಸಿರುವುದನ್ನು ತಿಳಿಸಲು ನನಗೆ ಅಪಾರ ಸಂತೋಷವಾಗುತ್ತಿದೆ. ತಾಯಿ ಹಾಗೂ ಮಕ್ಕಳು ಸಂಪೂರ್ಣ ಆರೋಗ್ಯವಾಗಿದ್ದಾರೆ. ಅಜ್ಜ–ಅಜ್ಜಿ ಆಗಿರುವ ನಮಗೆ ಈ ಕ್ಷಣ ಅತ್ಯಂತ ಅಮೂಲ್ಯ ಮತ್ತು ಸಂತಸದಾಯಕ” ಎಂದು ಅವರು ಬರೆದುಕೊಂಡಿದ್ದಾರೆ. ಜೊತೆಗೆ ಎಲ್ಲರ ಪ್ರೀತಿ, ಆಶೀರ್ವಾದ ಹಾಗೂ ಪ್ರಾರ್ಥನೆಗಳಿಗೆ ಕುಟುಂಬದ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನಾ ಕೊನಿಡೆಲಾ ದಂಪತಿಗೆ ಇದು ಎರಡನೇ ಬಾರಿ ಪೋಷಕರಾಗುತ್ತಿರುವ ಸಂಭ್ರಮ. ಈ ಹಿಂದೆ, 2023ರಲ್ಲಿ ಅವರಿಗೆ ಮೊದಲ ಹೆಣ್ಣು ಮಗು ಜನಿಸಿತ್ತು. ಆ ಮಗುವಿಗೆ ‘ಕ್ಲಿನ್ ಕಾರಾ’ ಎಂಬ ಸುಂದರ ಹೆಸರು ಇಡಲಾಗಿತ್ತು. ಇದೀಗ ಅವಳಿ ಮಕ್ಕಳ ಆಗಮನದಿಂದ ಚರಣ್ ಕುಟುಂಬದಲ್ಲಿ ಇನ್ನಷ್ಟು ಸಂಭ್ರಮ ಮನೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು “ಮೆಗಾ ಫ್ಯಾಮಿಲಿಗೆ ಡಬಲ್ ಬ್ಲೆಸಿಂಗ್” ಎಂದು ಕಮೆಂಟ್‌ಗಳ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಉಪಾಸನಾ ಕೊನಿಡೆಲಾ ಅವರು ತಮ್ಮ ಗರ್ಭಧಾರಣೆಯ ವಿಚಾರವನ್ನು 2025ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಹಿರಂಗಪಡಿಸಿದ್ದರು. ಆ ಸಮಯದಲ್ಲಿ ಹಂಚಿಕೊಂಡಿದ್ದ ಸೀಮಂತದ ವಿಡಿಯೋದಲ್ಲಿ “ಈ ದೀಪಾವಳಿಗೆ ಡಬಲ್ ಸಂಭ್ರಮ, ಡಬಲ್ ಪ್ರೀತಿ ಮತ್ತು ಡಬಲ್ ಆಶೀರ್ವಾದ” ಎಂಬ ಕ್ಯಾಪ್ಷನ್ ನೀಡಲಾಗಿತ್ತು. ಈ ಪೋಸ್ಟ್ ಅವಳಿ ಮಕ್ಕಳ ಸೂಚನೆ ನೀಡಿತ್ತು. ಫ್ಯಾನ್ಸ್ ಕೂಡ ಈ ವಿಷಯವನ್ನು ಊಹಿಸಿ ಶುಭ ಹಾರೈಕೆಗಳನ್ನು ಸಲ್ಲಿಸಿದ್ದರು. ಈಗ ಆ ನಿರೀಕ್ಷೆ ನಿಜವಾಗಿದೆ.
ಉಪಾಸನಾ ಅವರು ಉದ್ಯಮಿಯಾಗಿಯೂ, ಸಮಾಜಸೇವೆಯ ಮುಖವಾಗಿಯೂ ಗುರುತಿಸಿಕೊಂಡಿದ್ದಾರೆ. ಕುಟುಂಬ, ಉದ್ಯಮ ಮತ್ತು ಸಮಾಜ ಸೇವೆಯನ್ನು ಸಮತೋಲನದಲ್ಲಿ ನಿಭಾಯಿಸುವ ಅವರ ಜೀವನ ಶೈಲಿ ಹಲವರಿಗೆ ಪ್ರೇರಣೆಯಾಗಿದೆ.
ಇನ್ನು ರಾಮ್ ಚರಣ್ ವೃತ್ತಿಜೀವನದ ವಿಚಾರಕ್ಕೆ ಬಂದರೆ, ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಅವರು ಅಂತರರಾಷ್ಟ್ರೀಯ ಮಟ್ಟದಲ್ಲೂ ಖ್ಯಾತಿ ಗಳಿಸಿದ್ದಾರೆ.
