ವಿಜಯನಗರ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಮೈಲಾರದಲ್ಲಿ ನಡೆಯುವ ಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಕೂಡ ಭಾರೀ ಜನಸಾಗರವೇ ಹರಿದು ಬಂದಿತ್ತು. ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ, ಶ್ರದ್ಧಾಭಕ್ತಿಯಿಂದ ಜಾತ್ರೆಯಲ್ಲಿ ಪಾಲ್ಗೊಂಡರು. ಈ ಜಾತ್ರೆಯ ಪ್ರಮುಖ ಆಕರ್ಷಣೆಯಾದ ಕಾರ್ಣಿಕ ನುಡಿ 2026ರ ಭವಿಷ್ಯವಾಣಿಯಾಗಿ ಪ್ರಕಟವಾಗಿದ್ದು, “ಸಂಪಾಯಿತಲೇ ಪರಾಕ್” ಎಂಬ ದೇವವಾಣಿಯನ್ನು ಗೊರವಯ್ಯ ರಾಮಪ್ಪ ಅವರು ನುಡಿದರು.
ಮೈಲಾರ ಕಾರ್ಣಿಕವನ್ನು ನಾಡಿನ ಜನರು ಕೇವಲ ಧಾರ್ಮಿಕ ಆಚರಣೆಯಾಗಿ ಮಾತ್ರವಲ್ಲದೆ, ಆ ವರ್ಷದ ಮಳೆ, ಬೆಳೆ, ರಾಜಕೀಯ, ಸಾಮಾಜಿಕ ಸ್ಥಿತಿಗತಿಯ ಮುನ್ಸೂಚನೆಯಾಗಿ ಭಾವಿಸುತ್ತಾರೆ. ಹೀಗಾಗಿ ಪ್ರತಿವರ್ಷ ಕಾರ್ಣಿಕ ನುಡಿ ಹೊರಬೀಳುತ್ತಿದ್ದಂತೆಯೇ ಅದರ ಅರ್ಥ, ವಿಶ್ಲೇಷಣೆ ಕುರಿತು ವ್ಯಾಪಕ ಚರ್ಚೆ ಆರಂಭವಾಗುತ್ತದೆ.
“ಸಂಪಾಯಿತಲೇ ಪರಾಕ್” – ಇದರ ಅರ್ಥವೇನು?
ಭಕ್ತರು, ಹಿರಿಯರು ಹಾಗೂ ವಂಶಪಾರಂಪರ್ಯ ಧರ್ಮಕರ್ತರು ನೀಡಿರುವ ವಿವರಣೆ ಪ್ರಕಾರ, “ಸಂಪಾಯಿತಲೇ ಪರಾಕ್” ಎಂಬ ನುಡಿ ನಾಡಿನಲ್ಲಿ ಸಮೃದ್ಧಿ, ಸುಖಶಾಂತಿ, ಉತ್ತಮ ಮಳೆ ಹಾಗೂ ಬೆಳೆ ಎಂಬ ಅರ್ಥವನ್ನು ಹೊತ್ತಿದೆ. ಅಂದರೆ ಈ ವರ್ಷ ಯಾವುದೇ ದೊಡ್ಡ ಪ್ರಾಕೃತಿಕ ವಿಕೋಪ, ರಾಜಕೀಯ ಅಸ್ಥಿರತೆ ಅಥವಾ ಸಮಾಜದಲ್ಲಿ ತಲ್ಲಣಗಳಿಲ್ಲದೆ, ಜನಜೀವನ ಸುಗಮವಾಗಿರಲಿದೆ ಎಂಬ ನಂಬಿಕೆ ವ್ಯಕ್ತವಾಗಿದೆ.
18 ಅಡಿ ಬಿಲ್ಲನೇರಿ, ಭವಿಷ್ಯದ ನುಡಿ
ಕಾರ್ಣಿಕ ನುಡಿಯ ಸಂದರ್ಭದಲ್ಲಿ ಗೊರವಯ್ಯ ರಾಮಪ್ಪ ಅವರು 18 ಅಡಿ ಎತ್ತರದ ಬಿಲ್ಲನೇರಿಯ ಮೇಲೆ ನಿಂತು ದೇವವಾಣಿಯನ್ನು ಉಚ್ಛರಿಸಿದರು. ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ನೆರೆದಿದ್ದರು. ಕಾರ್ಣಿಕದ ಅರ್ಥವನ್ನು ತಕ್ಷಣವೇ ವಂಶಪಾರಂಪರ್ಯ ಧರ್ಮಕರ್ತ ವೆಂಕಟಪ್ಪ ಒಡೆಯರ್ ಅವರು ವಿವರಿಸಿದರು.
ಕಾರ್ಣಿಕ ಕಾರ್ಯಕ್ರಮದಲ್ಲಿ ಕಾಗಿನೇಲೆ ಗುರುಪೀಠದ ಶ್ರೀಗಳು, ಹೂವಿನಹಡಗಲಿ ಶಾಸಕ ಕೃಷ್ಣನಾಯ್ಕ್, ರಾಣೆಬೆನ್ನೂರು ಶಾಸಕ ಬಸವರಾಜ್, ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಜಾಹ್ನವಿ, ಮುಜರಾಯಿ ಇಲಾಖೆ ಉಪನಿರ್ದೇಶಕಿ ಸವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಳೆದ ವರ್ಷದ ಕಾರ್ಣಿಕ ನೆನಪು
2025ರಲ್ಲಿ ಮೈಲಾರ ಕಾರ್ಣಿಕವಾಗಿ “ತುಂಬಿದ ತುಳುಕಿತಲೇ ಪರಾಕ್” ಎಂಬ ನುಡಿ ಹೊರಬಿದ್ದಿತ್ತು. ಅದರಂತೆ ಕಳೆದ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಜಲಾಶಯಗಳು ತುಂಬಿ ಹರಿದವು. ಕೃಷಿಯಲ್ಲಿ ಉತ್ತಮ ಬೆಳೆ ದೊರೆತು ರೈತರಿಗೆ ಲಾಭವಾಯಿತು. ರಾಜಕೀಯವಾಗಿಯೂ ದೊಡ್ಡ ಬದಲಾವಣೆಗಳು ನಡೆಯದೆ, ರಾಜ್ಯದಲ್ಲಿ ಸ್ಥಿರತೆ ಮತ್ತು ಸಮೃದ್ಧಿಯ ವಾತಾವರಣ ಕಂಡುಬಂದಿತ್ತು.
