ಬೆಂಗಳೂರು, ಜ.03: ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ನೌಕರಿ ನೀಡಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜನವರಿ 02ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಅಂತಿಮವಾಗಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಅವರಿಗೆ ಗ್ರೂಪ್–ಸಿ ಹುದ್ದೆ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ.
ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರಾಮಾಣಿಕತೆ, ಸರಳತೆ ಹಾಗೂ ಜನಸ್ನೇಹಿ ಕಾರ್ಯಶೈಲಿಯಿಂದ ರಾಜ್ಯಾದ್ಯಂತ ಅಪಾರ ಗೌರವ ಪಡೆದಿದ್ದರು. ಬಡತನದ ಬೇಗೆಯಲ್ಲಿ ಬೆಂದು, ಸ್ವಶ್ರಮದಿಂದ ಐಎಎಸ್ ಹುದ್ದೆಗೆ ಏರಿದ ಮಹಾಂತೇಶ್ ಬೀಳಗಿ ಅವರು, ತಮ್ಮ ಬದುಕಿನ ಅನುಭವಗಳನ್ನು ವಿದ್ಯಾರ್ಥಿಗಳು ಹಾಗೂ ಯುವಕರೊಂದಿಗೆ ಹಂಚಿಕೊಳ್ಳುತ್ತಾ ಸದಾ ಪ್ರೇರಣೆಯ ಮಾತುಗಳನ್ನು ಹೇಳುತ್ತಿದ್ದ ಅಪರೂಪದ ಅಧಿಕಾರಿ ಆಗಿದ್ದರು.
2025ರ ನವೆಂಬರ್ 25ರಂದು ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ, ಜೇವರ್ಗಿ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಬ್ರಿಡ್ಜ್‌ಗೆ ಡಿಕ್ಕಿ ಹೊಡೆದು ನಾಲ್ಕೈದು ಬಾರಿ ಪಲ್ಟಿಯಾಗಿತ್ತು. ಈ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಹಾಂತೇಶ್ ಬೀಳಗಿ ಅವರು ನಂತರ ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಈ ದುರ್ಘಟನೆಗೆ ಸಂಬಂಧಿಸಿದಂತೆ ಮಹಾಂತೇಶ್ ಬೀಳಗಿ ಅವರ ಸಂಬಂಧಿ ಬಸವರಾಜ್ ಕಮರಟಗಿ ಅವರು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಚಾಲಕ ಆರೋಕಿಯಾ ಆಂಥೋನಿ ರಾಜ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚಾಲಕನ ಅತಿವೇಗ ಮತ್ತು ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಅಪಘಾತದಲ್ಲಿ ಚಾಲಕ ಆಂಥೋನಿ ರಾಜ್ ಕೂಡ ಗಂಭೀರವಾಗಿ ಗಾಯಗೊಂಡಿದ್ದರು.
ಮಹಾಂತೇಶ್ ಬೀಳಗಿ ಅವರ ನಿಧನದ ಬಳಿಕ, ಅವರ ಕುಟುಂಬಕ್ಕೆ ಸರ್ಕಾರದಿಂದ ನೆರವು ನೀಡಬೇಕೆಂಬ ಒತ್ತಾಯಗಳು ವಿವಿಧ ವಲಯಗಳಿಂದ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ವಿಷಯ ಚರ್ಚೆಗೆ ಬಂದು, ಅನುಕಂಪದ ಆಧಾರದ ಮೇಲೆ ಪುತ್ರಿಗೆ ಸರ್ಕಾರಿ ನೌಕರಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
