ಶಿರಾಡಿ ಘಾಟ್‌ನಲ್ಲಿ ಬಸ್-ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರು ದುರ್ಮರಣ

Untitled design 2026 03 13T200827.448

ಮಂಗಳೂರು: ಶಿರಾಡಿ ಘಾಟ್ ರಸ್ತೆಯಲ್ಲಿ ಇಂದು ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಕಾರಿನ ನಡುವೆ ನಡೆದ ಈ ಭೀಕರ ಡಿಕ್ಕಿಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭಿರ ಗಾಯವಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ವ್ಯಾಪ್ತಿಯ ಗುಂಡ್ಯ ಸಮೀಪ ಈ ದುರ್ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ರಾಜಹಂಸ ಬಸ್ ಮತ್ತು ಎದುರುಗಡೆಯಿಂದ ಬರುತ್ತಿದ್ದ ಕಾರಿನ ನಡುವೆ ಘರ್ಷಣೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಸಿಲುಕಿದ್ದವರನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ.

ಮೃತಪಟ್ಟವರನ್ನು ಕೊಕ್ಕಡ ನಿವಾಸಿ ಚಂದ್ರಶೇಖರ್ ಗೌಡ, ಉಜಿರೆ ನಿವಾಸಿಗಳಾದ ಶ್ರೀಧರ್ ಮರಕಡ ಮತ್ತು ಜನಾರ್ದನ ಕೆರಿಮಾರ್ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಇವರು ಸಕಲೇಶಪುರದಲ್ಲಿ ನಡೆದ ಸಂಬಂಧಿಕರ ಮದುವೆ ಸಮಾರಂಭ ಮುಗಿಸಿ ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದರು.

ಘಟನೆಯಲ್ಲಿ ಸುರೇಶ್ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಮತ್ತು ಹತ್ತಿರದ ಗುಂಡ್ಯ ಹೊರಠಾಣೆಯ ಪೊಲೀಸರು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡರು. ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

Exit mobile version