ರಾಜ್ಯದಲ್ಲಿ ಜೋರಾಯ್ತು ಗ್ಯಾಸ್ ಸಿಲಿಂಡರ್ ಅಭಾವ: ಎಲ್ಲೆಲ್ಲಿ ಏನೇನ್‌ ಸಮಸ್ಯೆ ಆಗ್ತಿದೆ..?

Untitled design 2026 03 28T212728.395

ಬೆಂಗಳೂರು, ಮಾ.28: ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್ ಬಿಕ್ಕಟ್ಟು ಜೋರಾಗಿದ್ದು, ಕರ್ನಾಟಕದಲ್ಲೂ ಜನರು ತೀವ್ರ ಪರದಾಟ ಅನುಭವಿಸುತ್ತಿದ್ದಾರೆ. ಗ್ಯಾಸ್ ಏಜೆನ್ಸಿಗಳ ಮುಂದೆ ಜನರು ಕ್ಯೂ ನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಹೋಟೆಲ್‌ಗಳು ಸೌದೆ ಒಲೆಗೆ ಮೊರೆ ಹೋಗಿವೆ. ಸೌದೆ ಬೆಲೆ ಏರಿಕೆಯಾಗಿದ್ದು, ಸಿಲಿಂಡರ್ ಕೊರತೆಯಿಂದ ಸಣ್ಣಪುಟ್ಟ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ.

ಹೋಟೆಲ್‌ಗಳಿಗೆ ಗ್ಯಾಸ್ ಸಿಗದೇ ಕಂಗಾಲು
ಕಮರ್ಷಿಯಲ್ LPG ಸಿಲಿಂಡರ್ ಪೂರೈಕೆ ತೀವ್ರ ಕುಸಿತ ಕಂಡಿದೆ. ಹೋಟೆಲ್‌ಗಳಿಗೆ ಸಾಮಾನ್ಯ ಬೇಡಿಕೆಯ ಶೇಕಡಾ 20ರಷ್ಟು ಮಾತ್ರ ಸಿಲಿಂಡರ್ ಸಿಗುತ್ತಿದೆ. ಇದರಿಂದಾಗಿ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಮಲ್ಲೇಶ್ವರಂನ ಹಳ್ಳಿಮನೆ ಹೋಟೆಲ್‌ನಲ್ಲಿ ನಡೆಯುತ್ತಿರುವ ಮ್ಯಾಂಗೋ ಮೇಳಕ್ಕೂ ಗ್ಯಾಸ್ ಸಮಸ್ಯೆ ತಟ್ಟಿದೆ. ಹಾವೇರಿ ಭಾಗದ ಫೇಮಸ್ ಡಾಬಾಗಳು ಸೌದೆ ಒಲೆ ಬಳಸಿ ಬಿಸಿಬಿಸಿ ಬಿರಿಯಾನಿ ತಯಾರಿಸುತ್ತಿವೆ. ಕೊಡಗು ಜಿಲ್ಲೆಯಲ್ಲೂ ಹೋಟೆಲ್‌ಗಳು ಸೌದೆಗಳ ಮೊರೆ ಹೋಗಿದ್ದು, ಸೌದೆಗೆ ಭಾರಿ ಡಿಮ್ಯಾಂಡ್ ಬಂದಿದೆ.

ಸಿಲಿಂಡರ್ ಪಡೆಯಲು ಕ್ಯೂ ನಿಂತ ಜನರು
ಕಲಬುರಗಿಯಲ್ಲಿ ಸಿಲಿಂಡರ್ ಸಿಗದೇ ಜನರು ಪರದಾಡಿದರು. ನಗರದ ಫಿಲ್ಟರ್ ಬೆಡ್ ಬಡಾವಣೆಯಲ್ಲಿ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಗ್ಯಾಸ್ ಏಜೆನ್ಸಿ ಮುಂದೆ ಉದ್ದುದ್ದ ಕ್ಯೂ ನಿಂತಿದ್ದರು. ಬೀದರ್‌ನಲ್ಲಿ ಸಿಲಿಂಡರ್ ಬೇಡಿಕೆ 10 ಪಟ್ಟು ಏರಿಕೆ ಕಂಡಿದೆ. ಸಾಮಾನ್ಯವಾಗಿ ತಿಂಗಳಿಗೆ 1500 ಸಿಲಿಂಡರ್ ಬುಕ್ಕಿಂಗ್ ಇರುತ್ತಿದ್ದರೆ, ಈಗ 9 ಸಾವಿರದಿಂದ 10 ಸಾವಿರ ಬುಕ್ಕಿಂಗ್ ಬರುತ್ತಿದೆ ಎಂದು ಏಜೆನ್ಸಿ ಮೂಲಗಳು ತಿಳಿಸಿವೆ. ಸರ್ಕಾರದ ನಿರಂತರ ಮನವಿಗಳ ಹೊರತಾಗಿಯೂ ಜನರು ಪ್ಯಾನಿಕ್‌ನಲ್ಲಿ ಬುಕ್ಕಿಂಗ್ ಮಾಡುತ್ತಿದ್ದಾರೆ.

ಟ್ರಾವೆಲ್ಸ್ ಮಾಲೀಕರಿಗೂ ತಟ್ಟಿದ ಬಿಸಿ
ಕೊಲ್ಲಿ ಕದನದ ಪರಿಣಾಮವಾಗಿ ಗ್ಯಾಸ್ ಬೆಲೆ ಏರಿಕೆಯಾಗಿದ್ದು, ಟ್ರಾವೆಲ್ಸ್ ವಾಹನ ಮಾಲೀಕರಿಗೂ ತೊಂದರೆಯಾಗಿದೆ. ಪ್ರವಾಸಿಗರು ಇಲ್ಲದೆ ವಾಹನಗಳು ನಿಂತಲ್ಲೇ ನಿಂತಿವೆ. ಸುಮಾರು 2 ಸಾವಿರ ವಾಹನ ಮಾಲೀಕರಿಗೆ ಸಂಕಷ್ಟ ಎದುರಾಗಿದ್ದು, ಶೇಕಡಾ 70ರಷ್ಟು ವ್ಯಾಪಾರ ಕುಸಿದಿದೆ. EMI ಪಾವತಿಗೂ ಕಾಸಿಲ್ಲ ಎಂದು ವಾಹನ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಆನೆ ಬಿಡಾರಕ್ಕೂ ತಟ್ಟಿದ ಕೊರತೆ
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೂ ಸಿಲಿಂಡರ್ ಕೊರತೆಯ ಬಿಸಿ ತಟ್ಟಿದೆ. ಆನೆಗಳಿಗೆ ಪ್ರತಿನಿತ್ಯ ಮುದ್ದೆ ತಯಾರಿಸಿ ನೀಡಲಾಗುತ್ತಿತ್ತು. ಈಗ ಸಿಲಿಂಡರ್ ಸಿಗದ ಕಾರಣ ಸೌದೆ ಒಲೆ ಬಳಸಿ ಆನೆಗಳಿಗೆ ಆಹಾರ ತಯಾರಿಸಲಾಗುತ್ತಿದೆ.

ಶತಕದ ಗಡಿಯಲ್ಲಿ ಆಟೋ ಗ್ಯಾಸ್ ದರ
ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ ದೇಶದಲ್ಲಿ ದಿನದಿನಕ್ಕೂ ಎಲ್‌ಪಿಜಿ ಆಟೋ ಗ್ಯಾಸ್ ಬೆಲೆ ಏರುತ್ತಿದೆ. ಕಲಬುರಗಿಯಲ್ಲಿ ನಿನ್ನೆ 85 ರೂಪಾಯಿ ಇದ್ದ ಗ್ಯಾಸ್ ಬೆಲೆ ಇಂದು ದಿಢೀರ್‌ನೆ 99.95 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಗ್ಯಾಸ್ ಅವಲಂಬಿತ ಆಟೋ, ಕ್ಯಾಬ್ ಚಾಲಕರು ಕಂಗಾಲಾಗಿದ್ದಾರೆ. ದರ ಏರಿಕೆ ಖಂಡಿಸಿ ಆಟೋ ಚಾಲಕರು ನಗರದ ಪ್ರಕಾಶ್ ಮಾಲ್ ಬಳಿಯಿರುವ ಎಲ್‌ಪಿಜಿ ಬಂಕ್‌ ಬಂದ್ ಮಾಡಿಸಿದ್ದಾರೆ.

Exit mobile version