ಐಪಿಎಲ್ 2026: ಬೌಂಡರಿ ಗೆರೆಯ ಬಳಿ ಸಾಲ್ಟ್‌ ಅದ್ಭುತ ಕ್ಯಾಚ್‌; ಹೊರನಡೆದ ಕ್ಲಾಸೆನ್

Untitled design 2026 03 28T224747.679

ಬೆಂಗಳೂರು, ಮಾ.28: ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಫಿಲ್ ಸಾಲ್ಟ್ ಅವರ ಫೀಲ್ಡಿಂಗ್ ಮ್ಯಾಜಿಕ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಚಲನ ಸೃಷ್ಟಿಸಿತು. ಹೆನ್ರಿಕ್ ಕ್ಲಾಸೆನ್ ಅವರ ವಿಕೆಟ್‌ನ ಕ್ಯಾಚ್ ನಾಟಕೀಯವಾಗಿ ಮಾರ್ಪಟ್ಟು, ಕ್ಲಾಸೆನ್ ಅವರು ಸಿಟ್ಟಿನಿಂದ ಮೈದಾನದಿಂದ ಹೊರನಡೆಯುವಂತಾಯಿತು.

ವಿವಾದಾತ್ಮಕ ಕ್ಯಾಚ್ ಹೇಗಿತ್ತು?

31 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಹೆನ್ರಿಕ್ ಕ್ಲಾಸೆನ್, ರೊಮಾರಿಯೊ ಶೆಫರ್ಡ್ ಅವರ ಎಸೆತವನ್ನು ಸಿಕ್ಸರ್ ಸಿಡಿಸಲು ಬಲವಾಗಿ ಹೊಡೆದರು. ಚೆಂಡು ಭರ್ಜರಿಯಾಗಿ ಬೌಂಡರಿ ಗೆರೆಯ ಕಡೆಗೆ ಹಾರಿತು. ಈ ವೇಳೆ ಬೌಂಡರಿ ಗೆರೆಯ ಬಳಿ ನಿಂತಿದ್ದ ಫಿಲ್ ಸಾಲ್ಟ್ ಅದ್ಭುತವಾಗಿ ಎತ್ತರಕ್ಕೆ ನೆಗೆದು ಚೆಂಡನ್ನು ಹಿಡಿದರು. ಆದರೆ ಕ್ಯಾಚ್ ಹಿಡಿದ ಕೂಡಲೇ ಸಾಲ್ಟ್  ಬೌಂಡರಿ ಗೆರೆಯ ಬಳಿ ಪಲ್ಟಿ ಹೊಡೆದರು.

ಈ ಸಂದರ್ಭದಲ್ಲಿ ಸಾಲ್ಟ್ ಅವರು ಕ್ಯಾಚ್ ಹಿಡಿದ ಬಳಿಕ ಬೌಂಡರಿ ಗೆರೆಯ ಪಟ್ಟಿಯನ್ನು ತಮ್ಮ ದೇಹದಿಂದ ಮುಟ್ಟಿದ್ದಾರೋ ಇಲ್ಲವೋ ಎಂಬುದು ಪ್ರಶ್ನೆಯಾಯಿತು. ಕೂಡಲೇ ಫೀಲ್ಡ್ ಅಂಪೈರ್‌ಗಳು ತೀರ್ಪನ್ನು ಮೂರನೇ ಅಂಪೈರ್‌ಗೆ ವರ್ಗಾಯಿಸಿದರು. ರೀಪ್ಲೇ ಪರಿಶೀಲನೆಯಲ್ಲಿ, ಸಾಲ್ಟ್ ಕ್ಯಾಚ್ ಹಿಡಿಯುವಾಗ ಮತ್ತು ಬೀಳುವಾಗ ಬೌಂಡರಿ ಪಟ್ಟಿ ಅಲುಗಾಡದ ಕಾರಣ, ಮೂರನೇ ಅಂಪೈರ್ ಅವರನ್ನು ಔಟ್ ಎಂದು ತೀರ್ಪು ನೀಡಿದರು.

ಕ್ಲಾಸೆನ್‌ನ ಅಸಮಾಧಾನ

ಆದರೆ ಈ ತೀರ್ಪು ಹೆನ್ರಿಕ್ ಕ್ಲಾಸೆನ್ ಅವರಿಗೆ ಸಮಾಧಾನ ನೀಡಲಿಲ್ಲ. ಮೈದಾನದಲ್ಲಿದ್ದ ದೊಡ್ಡ ಪರದೆಯ ಮೇಲೆ ರೀಪ್ಲೇ ಪುನರಾವರ್ತನೆಯಾಗುತ್ತಿದ್ದಂತೆ, ಕ್ಲಾಸೆನ್ ಸ್ಕ್ರೀನ್‌ನಲ್ಲೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಅವರು ಸಿಟ್ಟಿನಿಂದ ನೆಟ್ಟಗೆ ನಿಂತು, ಚೆಂಡನ್ನು ಹಿಡಿದ ನಂತರ ಸಾಲ್ಟ್ ಅವರ ದೇಹ ಭಾಗ ಬೌಂಡರಿ ಪಟ್ಟಿಯನ್ನು ಮುಟ್ಟಿದೆ ಎಂಬಂತೆ ಸನ್ನೆ ಮಾಡಿ, ಅಸಮಾಧಾನದಿಂದ ಮೈದಾನದಿಂದ ಹೊರನಡೆದರು. ಕ್ಲಾಸೆನ್ ಅವರ ಈ ನಿರ್ಗಮನದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ..

ಕಿಶನ್ ಕ್ಯಾಚ್‌ನಲ್ಲೂ ಸಾಲ್ಟ್ ಮಿಂಚು

ಇದಕ್ಕೂ ಮೊದಲು, ನಾಯಕ ಇಶಾನ್ ಕಿಶನ್ ಅವರ ವಿಕೆಟ್‌ನಲ್ಲೂ ಸಾಲ್ಟ್ ಅದ್ಭುತ ಪ್ರದರ್ಶನ ನೀಡಿದ್ದರು. 80 ರನ್ ಗಳಿಸಿ ಭರ್ಜರಿ ಆಟವಾಡುತ್ತಿದ್ದ ಇಶಾನ್ ಕಿಶನ್, ಸಿಕ್ಸರ್ ಸಿಡಿಸಲು ಬಲವಾಗಿ ಹೊಡೆದರು. ಚೆಂಡು ಲಾಂಗ್ ಆನ್ ಕಡೆಗೆ ಹಾರಿತು. ಅಲ್ಲಿದ್ದ ಫಿಲ್ ಸಾಲ್ಟ್ ದೂರದಿಂದ ಓಡಿ ಬಂದು, ಡೈವ್ ಹೊಡೆದು ಒಂದೇ ಕೈಯಲ್ಲಿ ಅದ್ಭುತವಾಗಿ ಕ್ಯಾಚ್ ಹಿಡಿದು ಅಭಿಮಾನಿಗಳನ್ನು ರಂಜಿಸಿದರು. 

ಅಭಿಮಾನಿಗಳ ಪ್ರತಿಕ್ರಿಯೆ

ಸಾಲ್ಟ್ ಅವರ ಈ ಎರಡೂ ಕ್ಯಾಚ್‌ಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಎದ್ದುನಿಂತು ಚಪ್ಪಾಳೆ ತಟ್ಟಿದರು. 

Exit mobile version