ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ, ಅವರ ಪತ್ನಿ ಪುಷ್ಪ ಮತ್ತು ಪುತ್ರ ರಾಜದೇವ್ ಅವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆಯ ಗಂಭೀರ ಆರೋಪಗಳ ಮೇಲೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಜನಪ್ರತಿನಿಧಿಗಳ ನ್ಯಾಯಾಲಯದ ನಿರ್ದೇಶನದ ಮೇರೆಗೆ ಈ ಕಾನೂನು ಕ್ರಮ ಜರುಗಿದೆ.
ಪ್ರಕರಣದ ಹಿನ್ನೆಲೆ
2022ರಲ್ಲಿ ಬಿಜೆಪಿ ಮುಖಂಡ ದಿನೇಶ್ ಹೊಸೂರು ಎಂಬುವರು ರಾಜೇಗೌಡ ಹಾಗೂ ಅವರ ಕುಟುಂಬದ ವಿರುದ್ಧ ದೂರು ನೀಡಿದ್ದರು. ದೂರಿನಲ್ಲಿ, ರಾಜೇಗೌಡರ ವಾರ್ಷಿಕ ಆದಾಯ ಕೇವಲ 38 ಲಕ್ಷ ರೂಪಾಯಿ ಇದ್ದರೂ, ಅವರು 124 ಕೋಟಿ ಬೆಲೆಯ ಭೂಮಿಯನ್ನು ಹೇಗೆ ಖರೀದಿಸಿದರು ಎಂಬ ಪ್ರಶ್ನೆಯನ್ನು ಎತ್ತಲಾಗಿತ್ತು. ಚುನಾವಣಾ ಸಂದರ್ಭದಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ರಾಜೇಗೌಡರು ತಮ್ಮ ಆಸ್ತಿ ಮೌಲ್ಯವನ್ನು 38 ಲಕ್ಷ ಎಂದು ನಮೂದಿಸಿದ್ದರು. ಆದರೆ, ಈ ಭೂಮಿ ಖರೀದಿಯ ಬಗ್ಗೆ ಯಾವುದೇ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ನೀಡಿರಲಿಲ್ಲ. ಇದು ಅಕ್ರಮ ಆಸ್ತಿ ಸಂಪಾದನೆ ಮತ್ತು ಭ್ರಷ್ಟಾಚಾರದ ಆರೋಪಗಳಿಗೆ ಕಾರಣವಾಗಿದೆ.
ದೂರಿನ ಪ್ರಕಾರ, ಈ ಭೂಮಿಯ ಮೇಲೆ 123 ಕೋಟಿ ರೂಪಾಯಿ ಬ್ಯಾಂಕ್ ಸಾಲವಿತ್ತು. ರಾಜೇಗೌಡರ ಪತ್ನಿ ಪುಷ್ಪಾ ಅವರು 16 ಕೋಟಿ ರೂಪಾಯಿ ನೀಡಿ ಸಾಲವನ್ನು ತೀರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದೇ ದಿನ ಎನ್.ಆರ್.ಪುರ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬ್ಯಾಂಕ್ ಸಾಲ ತೀರಿದೆ ಎಂದು ರಿಲೀಸ್ ಡೀಡ್ ಮಾಡಿಸಲಾಗಿದೆ. ಭೂಮಿಯನ್ನು ರಾಜೇಗೌಡರ ಪತ್ನಿ, ಪುತ್ರ ಹಾಗೂ ಸಹೋದರ ಅರ್ಪಿತ ರಾಜ್‌ದೇವ್ ಅವರ ಹೆಸರಿನಲ್ಲಿ ಖರೀದಿಸಲಾಗಿದೆ. ಇದರಲ್ಲಿ ಶೇ. 33ರಷ್ಟು ಹಂಚಿಕೆಯನ್ನು ಮೂವರು ಹಂಚಿಕೊಂಡಿದ್ದಾರೆ ಎಂಬ ಅಂಶವನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯವು ಈ ದೂರನ್ನು ಪರಿಗಣಿಸಿ, ಸೆಪ್ಟೆಂಬರ್ 16ರಂದು ಎಫ್‌ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು. ನವೆಂಬರ್ 17ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಇದರ ಹಿನ್ನೆಲೆಯಲ್ಲಿ ಹಾಸನ/ಚಿಕ್ಕಮಗಳೂರು ಲೋಕಾಯುಕ್ತ ಎಸ್‌ಪಿ ಅವರ ನೇತೃತ್ವದಲ್ಲಿ ಎಫ್‌ಐಆರ್ ದಾಖಲಾಗಿದೆ. ಲೋಕಾಯುಕ್ತ ಪೊಲೀಸರು ಈಗ ಸಮಗ್ರ ತನಿಖೆ ಕೈಗೊಳ್ಳಲಿದ್ದಾರೆ. ತನಿಖೆಯಲ್ಲಿ ರಾಜೇಗೌಡರ ಆದಾಯ ಮೂಲಗಳು, ಬ್ಯಾಂಕ್ ಸಾಲದ ವಿವರಗಳು ಹಾಗೂ ಭೂಮಿ ಖರೀದಿಯ ಹಿನ್ನೆಲೆಯನ್ನು ಪರಿಶೀಲಿಸಲಾಗುವುದು.