ಮೂರು ತಿಂಗಳಿನಿಂದ ಸಿಗದ ಸಂಬಳ: ಡೆತ್ ನೋಟ್ ಬರೆದು ನೇಣಿಗೆ ಶರಣಾದ ಗ್ರಂಥಪಾಲಕಿ

Untitled design (44)

ಕಲಬುರಗಿ, ಅಕ್ಟೋಬರ್ 13: ಬರೋಬ್ಬರಿ ಮೂರು ತಿಂಗಳ ಕಾಲ ಸಂಬಳವಿಲ್ಲದೆ ಆರ್ಥಿಕ ಸಂಕಟಕ್ಕೆ ಸಿಲುಕಿದ್ದ ಗ್ರಂಥಪಾಲಕಿ ಡೆತ್‌‌ ನೋಟ್‌ ಬರೆದು ನೇಣಿಗೆ ಶರಣಾದ ಘಟನೆ ಕಲಬುರಗಿಯ ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ನಡೆದಿದೆ. ಭಾಗ್ಯವಂತಿ (40) ಆತ್ಮಹತ್ಯೆ ಮಾಡಿಕೊಂಡ ಗ್ರಂಥಪಾಲಕಿ. 

ಭಾಗ್ಯವಂತಿ ಅವರು ಗ್ರಾಮ ಪಂಚಾಯತಿ ಆವರಣದಲ್ಲಿರುವ ಅರಿವು ಕೇಂದ್ರದಲ್ಲಿ ಗ್ರಂಥಪಾಲಕಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಸಂಬಳ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ನಿರ್ಲಕ್ಷ್ಯದ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಭಾಗ್ಯವಂತಿ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಗ್ರಾಮ ಪಂಚಾಯತಿ ಆವರಣದಲ್ಲೇ ನಡೆದಿದೆ. ಈ ಘಟನೆಯ ಬಗ್ಗೆ ಮಳಖೇಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಭಾಗ್ಯವಂತಿ ಅವರ ಡೆತ್ ನೋಟ್‌ನಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. “ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ. ಇದರಿಂದ ನನ್ನ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಅವರು ಬರೆದಿದ್ದರು.ಭಾಗ್ಯವಂತಿ ಅವರು ಹಲವು ಬಾರಿ ಸಂಬಳಕ್ಕಾಗಿ ಮನವಿ ಮಾಡಿದ್ದರೂ ಅಧಿಕಾರಿಗಳು ಕಿವಿಗೊಡಲಿಲ್ಲ. ಇದರಿಂದ ಅವರ ಕುಟುಂಬದಲ್ಲಿ ಆರ್ಥಿಕ ತೊಂದರೆಗಳು ಹೆಚ್ಚಾಗಿ, ಕೊನೆಗೆ ಈ ದಾರಿ ಹಿಡಿದಿದ್ದಾರೆ.

ಪೊಲೀಸರು ಈಗ ತನಿಖೆ ನಡೆಸುತ್ತಿದ್ದಾರೆ. ಡೆತ್ ನೋಟ್ ಅನ್ನು ಆಧಾರವಾಗಿ ಇಟ್ಟುಕೊಂಡು, ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಕುಟುಂಬ ಆಗ್ರಹಿಸಿದೆ. ಇಬ್ಬರನ್ನೂ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

 

 

 

Exit mobile version