‘ಕಲಿಯುಗದ ಕುಡುಕ’ ರಾಜು ತಾಳಿಕೋಟೆ ಅವರ ಮೂಲ ಹೆಸರು ಏನು ಗೊತ್ತಾ?

Untitled design (48)

ಕನ್ನಡದ ಹಾಸ್ಯ ಲೋಕದ ಪ್ರಿಯ ಮುಖ, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರದ ನಗು ಮೂಡಿಸಿದ ನಟ ರಾಜು ತಾಳಿಕೋಟೆ (ಮೂಲ ಹೆಸರು ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಮನಸಾರೆ’, ‘ಪಂಚರಂಗಿ’, ‘ಲೈಫು ಇಷ್ಟೇನೆ’ ಮೊದಲಾದ ಚಿತ್ರಗಳ ಮೂಲಕ ಪ್ರೇಕ್ಷಕರ ಹೃದಯದಲ್ಲಿ ಅಳಿಯದ ಗುರುತು ಬಿಟ್ಟಿದ್ದ ಅವರು, ರಂಗಭೂಮಿ ಅಸಾಧಾರಣ ಪಾತ್ರಗಳನ್ನು ನಿರ್ವಹಿಸಿದ್ದರು.

ರಾಜು ತಾಳಿಕೋಟೆ ಅವರು ಮೂಲತಃ ಬೀದರ ಜಿಲ್ಲೆಯ ತಾಳಿಕೋಟೆ ಮೂಲದವರು. ತಮ್ಮ ಮೂಲ ಹೆಸರು ರಾಜೇಸಾಬ್‌ ಮಕ್ತುಮ್‌ಸಾಬ್‌ ಯೆಂಕಂಚಿ ಎಂಬುದಾದರೂ, ಜನರು ಅವರನ್ನು “ರಾಜು” ಎಂದು ಕರೆಯುತ್ತಿದ್ದರಿಂದ ಅವರು ತಮ್ಮ ಹೆಸರಿನಲ್ಲಿ “ತಾಳಿಕೋಟೆ” ಎಂಬ ಊರಿನ ಹೆಸರನ್ನು ಸೇರಿಸಿಕೊಂಡರು. “ಜನರು ನನ್ನನ್ನು ರಾಜು ಅಂತಾ ಕರೆಯುತ್ತಿದ್ದರು. ನನ್ನ ಊರಿನ ಹೆಸರನ್ನು ಸೇರಿಸಿಕೊಂಡು ಪ್ರಸಿದ್ಧಿಯಾಯಿತು,” ಎಂದು ಅವರು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ರಾಜು ತಾಳಿಕೋಟೆ ಅವರ ತಂದೆ ಮತ್ತು ತಾಯಿ ಇಬ್ಬರೂ ರಂಗಭೂಮಿ ಕಲಾವಿದರು. ಬಾಲ್ಯದಲ್ಲೇ ರಂಗದ ವಾತಾವರಣದಲ್ಲಿ ಬೆಳೆದ ಅವರು, ತಮ್ಮ ಪೋಷಕರು ನಡೆಸುತ್ತಿದ್ದ ನಾಟಕ ಸಂಸ್ಥೆಯ ಮುಂದುವರೆದರು. ಅಮ್ಮ-ಅಪ್ಪ ನಿಧನವಾದ ಬಳಿಕ ಅಣ್ಣ ಸಂಸ್ಥೆಯನ್ನು ಮುಂದುವರಿಸಿದರು. ಆದರೆ ಅಣ್ಣ ಕೂಡ ನಿಧನವಾದ ನಂತರ, ರಾಜು ಅವರ ಜೀವನ ಕಷ್ಟದ ಹಾದಿಗೆ ತಿರುಗಿತ್ತು.

ಅವರ ಬಾಲ್ಯ ವಿದ್ಯಾಭ್ಯಾಸ ಮಠದಲ್ಲಿ ನಡೆದಿತ್ತು. “ನಾನು ಮುಸ್ಲಿಂ ಆಗಿದ್ದರೂ, ಮಠದಲ್ಲಿ ಓದುತ್ತಿದ್ದೆ. ಅಲ್ಲಿ ವಿಭೂತಿ ಹಾಕಿಕೊಂಡೇ ಊಟ ಮಾಡಬೇಕಿತ್ತು, ವಚನಗಳ ಪಾಠ ಮಾಡಬೇಕಿತ್ತು. ಇಂದಿಗೂ ಹಿಂದೂ ಸ್ನೇಹಿತರ ಮನೆಗೆ ಹೋದಾಗ ವಿಭೂತಿ ಧರಿಸಿ ಊಟ ಮಾಡುತ್ತೇನೆ,” ಎಂದು ಅವರು ಹೇಳಿದ್ದರು.

ಕಷ್ಟದ ದಿನಗಳು 
ತಮ್ಮ ಶಿಕ್ಷಣವನ್ನು ಮೂರನೇ ತರಗತಿಯವರೆಗೂ ಪೂರ್ಣಗೊಳಿಸಿದ್ದ ರಾಜು, ನಂತರ ಶಾಲೆ ಬಿಟ್ಟು ಕೆಲಸಕ್ಕೆ ತೆರಳಿದರು. ಹೋಟೆಲ್‌ಗಳಲ್ಲಿ ಕೆಲಸ ಮಾಡಿದರು, ನಂತರ ಲಾರಿ ಕ್ಲೀನರ್‌ ಆಗಿಯೂ ದುಡಿದರು. ಆದರೆ ಅವರ ಮನಸ್ಸು ಸದಾ ರಂಗಭೂಮಿಯತ್ತಲೇ ಸೆಳೆಯಿತು. “ಹೋಟೆಲ್‌ನಲ್ಲಿ ಕೆಲಸ ಮಾಡುವಾಗಲೂ, ಇದು ನನ್ನ ಕೆಲಸ ಅಲ್ಲ ಅನ್ನಿಸುತ್ತಿತ್ತು. ನಾಟಕವೇ ನನ್ನ ಪ್ರಾಣ,” ಎಂದು ಅವರು ನೆನಪಿಸಿಕೊಂಡಿದ್ದರು.

ರಂಗಭೂಮಿ ಮತ್ತು ಜನಪ್ರಿಯತೆ
ಅವರ ನಾಟಕ ‘ಕಲಿಯುಗದ ಕುಡುಕ’ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಈ ನಾಟಕದ ಹಾಸ್ಯ, ಅವರ ಅಭಿನಯ ಹಾಗೂ ವಿಶಿಷ್ಟ ಸಂಭಾಷಣಾ ಶೈಲಿ ಅವರಿಗೆ ಅಪಾರ ಜನಪ್ರಿಯತೆ ನೀಡಿತ್ತು. ರಂಗದಿಂದ ಅವರು ಚಲನಚಿತ್ರ ಲೋಕಕ್ಕೆ ಕಾಲಿಟ್ಟರು.

ಸಿನಿಮಾ ಲೋಕ ಮತ್ತು ಬಿಗ್‌ಬಾಸ್‌ ಪಯಣ
‘ಮನಸಾರೆ’ ಚಿತ್ರದಲ್ಲಿ ಶಂಕರಪ್ಪ ಪಾತ್ರದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ ಅವರು, ‘ಪಂಚರಂಗಿ’ಯ ಪಂಚಾಕ್ಷರಿ ಮತ್ತು ‘ಲೈಫು ಇಷ್ಟೇನೆ’ಯ ಗೇಟ್‌ಕೀಪರ್‌ ಪಾತ್ರಗಳ ಮೂಲಕ ನಗೆಯೊಂದಿಗೆ ಹೃದಯ ಗೆದ್ದರು. ಕೇವಲ ಚಿತ್ರರಂಗದಲ್ಲೇ ಅಲ್ಲ, ಟಿವಿ ಪ್ರೇಕ್ಷಕರಿಗೂ ಪರಿಚಿತ ಮುಖವಾದ ರಾಜು, ‘ಬಿಗ್‌ಬಾಸ್‌ ಕನ್ನಡ ಸೀಸನ್‌ 7’ ರಲ್ಲೂ ಭಾಗವಹಿಸಿದ್ದರು. ಅವರ ಜೀವನ, ಕಲೆ ಮತ್ತು ನಗು ಎಲ್ಲವೂ ಜನರ ಮನದಲ್ಲಿ ಶಾಶ್ವತವಾಗಿ ಉಳಿದಿವೆ.

Exit mobile version