ವಿಧಾನ ಪರಿಷತ್ ಅಧಿವೇಶನದಲ್ಲಿ ಹದಿಹರೆಯದ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತ ವಿಶೇಷ ಚರ್ಚೆಯಲ್ಲಿ ಸದನದ ಸದಸ್ಯರು ತಮ್ಮ ಅಭಿಪ್ರಾಯ ಮಂಡಿಸಿದರು.
ಈ ಕುರಿತು ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ, ಒಟ್ಟು ಜನಸಂಖ್ಯೆಯಲ್ಲಿ ಹದಿಹರೆಯದ ಮಕ್ಕಳು ಶೇ 34 ರಷ್ಟಿದ್ದಾರೆ. ಇವರಿಗೆ ಸರ್ಕಾರ ಬಿಸಿ ಊಟದ ಜೊತೆಗೆ ಮೊಟ್ಟೆ, ಬೇಳೆಕಾಳು, ಹಾಲು ಮುಂತಾದ ಪೌಷ್ಠಿಕ ಆಹಾರ ನೀಡುತ್ತಿದೆ. ಋತುಮತಿಯಾದ ಶೇ 64ರಷ್ಟು ಹೆಣ್ಣುಮಕ್ಕಳು ಅನೀಮಿಯಾದಿಂದ ಬಳಲುತ್ತಿದ್ದು, ಇವರಿಗೆ ಕಬ್ಬಿಣ ಮತ್ತು ಫೊಲಿಕ್ ಆಸಿಡ್ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ ಎಂದರು
ಬಾಲ್ಯವಿವಾಹ ಪ್ರಕರಣಗಳಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಒಟ್ಟು 8,348 ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಶಕ್ತಿ, ಗೃಹಲಕ್ಷ್ಮಿ ಮುಂತಾದ ಯೋಜನೆ ಜಾರಿಗೆ ತರಲಾಗಿದೆ.ಯುವಜನತೆಗೆ ಶಿಕ್ಷಣದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಅವರು ಕೆಟ್ಟ ಚಟಗಳಿಗೆ ದಾಸರಾಗದೆ ಸಮಾಜದ ಏಳ್ಗೆಗೆ ಶ್ರಮಿಸಬೇಕೆಂದರು.
ನಂತರ ಸದನದ ಸದಸ್ಯರಾದ ಉಮಾಶ್ರೀ ಮಾತನಾಡಿ, ಅಪ್ರಾಪ್ರ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉತ್ತಮ ಆರೋಗ್ಯ ಕಲ್ಪಿಸುವುದು ನಮ್ಮ ಹೊಣೆಯಾಗಿದೆ. 13 ರಿಂದ 18 ವರ್ಷದೊಳಗಿನ ಮಕ್ಕಳನ್ನು ದಾರಿತಪ್ಪದಂತೆ ಕಾಪಾಡುವುದು ಸವಾಲೇ ಸರಿ. ಅವರು ಸಾಮಾಜಿಕ ಜಾಲತಾಣ, ಆನ್ ಲೈನ್ ಆಟಗಳಿಗೆ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ .ಈ ವಯಸ್ಸಿನಲ್ಲಿ ಯಾವುದು ಒಳಿತು ಯಾವುದು ಕೆಡಕು ಎಂಬುದರ ಅರಿವು ಅವರಲ್ಲಿ ಇರುವುದಿಲ್ಲ.ಅಲ್ಲದೆ ಮಾದಕ ದ್ರವ್ಯ, ಮದ್ಯಪಾನದಿಂದ ತಮ್ಮ ಸಂಯಮ ಕಳೆದುಕೊಳ್ಳುತ್ತಿದ್ದಾರೆ . ಇದರಿಂದ ಆತ್ಮಹತ್ಯೆ ಪ್ರಕರಣಗಳು ಸಹ ಹೆಚ್ಚುತ್ತಿವೆ ಎಂದರು
ಸದೃಢ ಹಾಗೂ ಉತ್ತಮ ಯುವಜನತೆಯನ್ನು ಬೆಳೆಸಬೇಕಾದ ಹೊಣೆಗಾರಿಕೆ ಸಮಾಜದ ಮೇಲಿದೆ. ಒಮ್ಮೆ ದಾರಿ ತಪ್ಪಿದರೆ ಮತ್ತೆ ಅವರನ್ನು ಮುಖ್ಯವಾಹಿನಿಗೆ ತರಲು ಕಷ್ಟಕರವಾಗುತ್ತದೆ. ಆದ್ದರಿಂದ ಬೆಳೆಯುವ ವಯಸ್ಸಿನಲ್ಲಿ ಅವರಿಗೆ ಉತ್ತಮ ಭವಿಷ್ಯ ನೀಡುವ ಹೊಣೆಗಾರಿಕೆ ನಮ್ಮ ನಿಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟ, ನಂತರ ಈ ಕುರಿತು ಹಲವು ಸದಸ್ಯರು ಸಹ ವಿಚಾರ ವಿನಿಮಯ ಮಾಡಿಕೊಂಡರು.