ಮೈಸೂರು, ನವೆಂಬರ್ 16: ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜೊಂದರಲ್ಲಿ ನಡೆದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕಾಲೇಜಿನ ಉಪನ್ಯಾಸಕ ಭರತ್ ಭಾರ್ಗವ ಅವರು ಅದೇ ಕಾಲೇಜಿನಲ್ಲಿ ಓದುತ್ತಿರುವ ಒಂದು ವಿದ್ಯಾರ್ಥಿನಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 126(2), 75(2), 351(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಉಪನ್ಯಾಸಕನ ವಿರುದ್ಧ ತನಿಖೆ ಆರಂಭಿಸಿದ್ದಾರೆ.
ಭರತ್ ಭಾರ್ಗವ ಅವರು ತಮ್ಮ ವೃತ್ತಿಯನ್ನ ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ಕೊಡುತ್ತಿದ್ದರು. ಹೆಚ್ಚು ಮಾರ್ಕ್ಸ್ ಕೊಡುತ್ತೇನೆ, ಒಳ್ಳೆಯ ಕೆಲಸ ಕೊಡಿಸುತ್ತೇನೆ, ಹೊರಗೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಎಂದು ಕರೆಯುತ್ತಿದ್ದರಂತೆ. ಇದಲ್ಲದೆ, ಖಾಸಗಿ ಅಂಗಗಳ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದರು. ವಿದ್ಯಾರ್ಥಿನಿ ತಾನು ಹೇಳಿದಂತೆ ಕೇಳದಿದ್ದರೆ ಇಂಟರ್ನಲ್ ಮಾರ್ಕ್ಸ್‌ನಲ್ಲಿ ಫೇಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವಿದ್ಯಾರ್ಥಿನಿ , ಉಪನ್ಯಾಸಕನ ಅಸಭ್ಯ ವರ್ತನೆಯ ಬಗ್ಗೆ ಕಾಲೇಜಿನ ಮಹಿಳಾ ಉಪನ್ಯಾಸಕರ ಬಳಿ ದೂರು ನೀಡಿದ್ದಳು. ಆದರೆ, ಇದರ ಬೆನ್ನಲ್ಲೇ ಭರತ್ ಭಾರ್ಗವ ಅವರು ರಾತ್ರಿ ವೇಳೆಯಲ್ಲಿ ಫೋನ್ ಕರೆ ಮಾಡಿ ಗಂಭೀರ ಬೆದರಿಕೆ ಹಾಕಿದ್ದಾರೆ. ದೂರು ಹಿಂಪಡೆಯದಿದ್ದರೆ ಪರಿಣಾಮ ಅನುಭವಿಸುತ್ತೀಯ..ಎಂದೆಲ್ಲಾ ಬೆದರಿಕೆ ನೀಡಿದ್ದಾರೆ. ಇದರಿಂದ ಹೆದರಿದ ವಿದ್ಯಾರ್ಥಿನಿ, ತನ್ನ ಆತಂಕದಿಂದ ಇದರ ಬಗ್ಗೆ ಎಲ್ಲೂ ಮಾತನಾಡದೇ ಇದ್ದಳು ಆದರೆ, ಸ್ನೇಹಿತರು ಮತ್ತು ಕುಟುಂಬದ ಪ್ರೋತ್ಸಾಹದಿಂದ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ BNS ಸೆಕ್ಷನ್ 126(2) (ಮಹಿಳೆಯ ವಿರುದ್ಧ ತಪ್ಪು ನಡವಳಿಕೆ), 75(2) (ಲೈಂಗಿಕ ಕಿರುಕುಳ), 351(2) (ಅಪರಾಧಿಕ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ರವಿಕುಮಾರ್ ಅವರು, ದೂರು ಸ್ವೀಕಾರ ಮಾಡಿಕೊಂಡಿದ್ದೇವೆ. ಆರೋಪಿಯನ್ನು ವಿಚಾರಣೆಗೆ ಕರೆಸಿ, ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ. ತನಿಖೆಯನ್ನು ತ್ವರಿತವಾಗಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ಮಾಹಿತಿ ದೊರೆತಿದೆ. ಆದರೆ, ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಕಾಲೇಜಿನಲ್ಲಿ ಆಂತರಿಕ ತನಿಖಾ ಸಮಿತಿ ರಚನೆಯಾಗುವ ಸಾಧ್ಯತೆಯಿದೆ. ವಿದ್ಯಾರ್ಥಿನಿಯ ಗೌಪ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಮತ್ತು ಕಾಲೇಜು ಆಡಳಿತ ಸಹಕಾರ ನೀಡುತ್ತಿರುವುದಾಗಿ ತಿಳಿದುಬಂದಿದೆ.
ಈ ಘಟನೆಯಿಂದ ವಿದ್ಯಾರ್ಥಿನಿ ಆಘಾತಕ್ಕೊಳಗಾಗಿದ್ದಾಳೆ. ಆಕೆಯು ಪರೀಕ್ಷೆಗಳಲ್ಲಿ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ನೇಹಿತರು ತಿಳಿಸಿದ್ದಾರೆ. ಕಾಲೇಜಿನ ಕೌನ್ಸೆಲಿಂಗ್ ಸೆಲ್‌ನ ಸಹಾಯ ಪಡೆಯುವಂತೆ ಸಲಹೆ ನೀಡಲಾಗಿದೆ. ಮಹಿಳಾ ಸಂಘಟನೆಗಳು ಈ ಘಟನೆಯನ್ನು ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿವೆ.ಪೊಲೀಸರು ಆರೋಪಿ ಭರತ್ ಭಾರ್ಗವ ಅವರನ್ನು ಬಂಧಿಸುವ ಸಾಧ್ಯತೆಯಿದ್ದು, ತನಿಖೆಯಲ್ಲಿ ಸಾಕ್ಷ್ಯಗಳಾದ ಫೋನ್ ಕರೆ ರೆಕಾರ್ಡ್, ವಾಟ್ಸಾಪ್ ಸಂದೇಶಗಳು, ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದೆ.
