ಬೆಂಗಳೂರು, ಸೆಪ್ಟೆಂಬರ್ 11: ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯ (ED) ದಾಳಿ ಕುರಿತು ಇದೀಗ ಅಧಿಕೃತ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇ.ಡಿ. ತಿಳಿಸಿದೆ.
ಇ.ಡಿ. ಅಧಿಕಾರಿಗಳು ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತರಿಗೆ ಸಂಬಂಧಿಸಿದ ಒಟ್ಟು 21 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ, ಗೋಕಾಕ್ ಮತ್ತು ಕೋಲ್ಕತ್ತಾದ ವಿವಿಧ ಸ್ಥಳಗಳಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
BVEPL ಕಂಪನಿಯ ಮೇಲೂ ED ಕಣ್ಣು
M/s Bharat Vanijya Eastern Private Ltd (BVEPL) ಎಂಬ ಖಾಸಗಿ ಕಂಪನಿಯ ಕಚೇರಿಗಳು, ಮಾಲೀಕರ ಕಚೇರಿ ಹಾಗೂ ನಿವಾಸಗಳಲ್ಲೂ ಶೋಧ ನಡೆಸಲಾಗಿದೆ. PWD ಇಲಾಖೆಯಿಂದ ಟೆಂಡರ್ ಪಡೆಯಲು ಈ ಕಂಪನಿಯು ಕಿಕ್‌ಬ್ಯಾಕ್ ಪಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆದಿದೆ ಎಂದು ಇ.ಡಿ. ಹೇಳಿದೆ.
ಕಿಕ್‌ಬ್ಯಾಕ್ ಮೂಲಕ ಪಡೆದ ಹಣವನ್ನು ವಿದೇಶಿ ಆಸ್ತಿಗಳನ್ನು ಖರೀದಿಸಲು ಬಳಸಲಾಗಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಪತ್ತೆ
ಶೋಧ ಕಾರ್ಯಾಚರಣೆ ವೇಳೆ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ತಂಗಿ ಮಹಾದೇವಿ ಮಂಜುನಾಥ್ ಅವರು ಹಲವು ವಿದೇಶಿ ಸಂಸ್ಥೆಗಳಲ್ಲಿ ಷೇರು ಪಾಲುದಾರಿಕೆ ಹೊಂದಿರುವುದು ಪತ್ತೆಯಾಗಿದೆ ಎಂದು ಇ.ಡಿ. ತಿಳಿಸಿದೆ.
M/s Eldorado Mining Resources, Congo ಹಾಗೂ M/s Nova Aurum Mining Ltd, Zambia ಸೇರಿದಂತೆ ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.
ಇದೇ ವೇಳೆ, ಸತೀಶ್ ಜಾರಕಿಹೊಳಿ ಅವರು ಕಾಂಗೋದಲ್ಲಿರುವ M/s Magnitude Star SARL ಸಂಸ್ಥೆಯಲ್ಲಿ ಶೇ.40ರಷ್ಟು ಷೇರು ಪಾಲು ಹೊಂದಿರುವುದು ಬಹಿರಂಗವಾಗಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.
ಆಫ್ರಿಕಾದಲ್ಲಿರುವ ಗಣಿಗಾರಿಕೆ ಆಸ್ತಿಗಳು ಸೇರಿದಂತೆ ವಿವಿಧ ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
₹3.3 ಕೋಟಿ ಲೆಕ್ಕಕ್ಕೆ ಸಿಗದ ನಗದು ಸೀಜ್
ಶೋಧ ಕಾರ್ಯಾಚರಣೆ ವೇಳೆ ಲೆಕ್ಕಕ್ಕೆ ಸಿಗದ ₹3.3 ಕೋಟಿ ನಗದು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ತಿಳಿಸಿದೆ. ಇದರ ಜೊತೆಗೆ ಅಮೆರಿಕನ್ ಡಾಲರ್ ಮತ್ತು ಯೂರೋ ಸೇರಿದಂತೆ ಸುಮಾರು ₹15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿಯನ್ನೂ ಸೀಜ್ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕಾಂಗೋದಲ್ಲಿರುವ ಒಂದು ಸಂಸ್ಥೆಯಲ್ಲಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿವೆ ಎಂದು ಇ.ಡಿ. ತಿಳಿಸಿದೆ.
PWD ಅಕ್ರಮಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯ?
ಶೋಧದ ವೇಳೆ PWD ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಇ.ಡಿ. ಹೇಳಿದೆ. BVEPL ಸೇರಿದಂತೆ ಕೆಲವು ಗುತ್ತಿಗೆದಾರರಿಂದ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ಡಿಜಿಟಲ್ ಸಾಕ್ಷ್ಯಗಳೂ ದೊರೆತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
FEMA ಉಲ್ಲಂಘನೆಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು, ವಿದೇಶಿ ಹೂಡಿಕೆಗಳು, ಗಣಿಗಾರಿಕೆ ಆಸ್ತಿಗಳು ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಹಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಿದೆ.
