ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋ ಹಾಗೂ ಅದರಲ್ಲಿನ ಆರೋಪಗಳ ಕುರಿತು ಬೆಂಗಳೂರು ಸಿಸಿಬಿ ಸೈಬರ್ ಪೊಲೀಸರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಈವರೆಗೆ ನಡೆಸಿದ ತನಿಖೆಯಲ್ಲಿ ವಿಡಿಯೋದಲ್ಲಿ ಬಿಂಬಿಸಿರುವ ಆರೋಪಗಳಿಗೆ ಸಾಕ್ಷ್ಯಾಧಾರಗಳು ದೊರೆತಿಲ್ಲ. ಅಲ್ಲದೆ, ವಿಡಿಯೋದಲ್ಲಿನ ನಿರೂಪಣೆ ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಕಟ್ಟುಕಥೆಯಾಗಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿನ ಆರೋಪಗಳಿಗೆ ಸಾಕ್ಷ್ಯವಿಲ್ಲ!
ಸಿಸಿಬಿ ಪ್ರಕಟಣೆಯ ಪ್ರಕಾರ, ವಿಡಿಯೋದಲ್ಲಿ ಬಿಂಬಿಸಿರುವ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಈವರೆಗೆ ದಾಖಲಿಸಿದ ಹೇಳಿಕೆಗಳು ಹಾಗೂ ಸಂಗ್ರಹಿಸಿದ ಸಾಕ್ಷ್ಯಾಧಾರಗಳು ದೃಢಪಡಿಸುವುದಿಲ್ಲ. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಎಲ್ಲ ವ್ಯಕ್ತಿಗಳನ್ನು ಗುರುತಿಸಿ ವಿಚಾರಣೆ ನಡೆಸಲಾಗಿದ್ದು, ಕೆಲವರನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೊಳಪಡಿಸಲಾಗಿದೆ. ಅವರ ಹೇಳಿಕೆಗಳ ಆಧಾರದ ಮೇಲೆ ಆರೋಪಗಳು ಸುಳ್ಳು ಮತ್ತು ಕಟ್ಟುಕಥೆಯಿಂದ ಕೂಡಿರುವ ಸಾಧ್ಯತೆ ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತಿಳಿಸಲಾಗಿದೆ.
ಆದರೆ, ಪ್ರಕರಣದ ಎಲ್ಲ ಆಯಾಮಗಳ ಕುರಿತು ತನಿಖೆ ಇನ್ನೂ ಮುಂದುವರಿದಿದೆ. ಹೀಗಾಗಿ, ತನಿಖೆಯ ಅಂತಿಮ ನಿರ್ಧಾರಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ವಿಡಿಯೋ ಚಿತ್ರೀಕರಿಸಲು ಬಳಸಲಾಗಿದೆ ಎನ್ನಲಾದ ಮೂಲ ಮೊಬೈಲ್ ಫೋನ್ ಅನ್ನು ಪೊಲೀಸರು ಪತ್ತೆಹಚ್ಚಿ ಜಪ್ತಿ ಮಾಡಿದ್ದಾರೆ. ವಿಡಿಯೋದ ನೈಜತೆ, ಸಮಗ್ರತೆ ಮತ್ತು ತಾಂತ್ರಿಕ ವಿವರಗಳನ್ನು ಪರಿಶೀಲಿಸಲು ಮೊಬೈಲ್ ಫೋನ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಇನ್ನಷ್ಟೇ ಬರಬೇಕಿದೆ.
2011ರಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದಕ್ಕೆ ಸಂಬಂಧಿಸಿದ ವಿಡಿಯೋವನ್ನು 2023ರಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ತನಿಖೆಯಲ್ಲಿದೆ. ವಿಡಿಯೋವನ್ನು ಪೂರ್ವಯೋಜಿತವಾಗಿ ಸೃಷ್ಟಿಸಲಾಗಿದೆಯೇ, ತಿರುಚಲಾಗಿದೆಯೇ ಅಥವಾ ತಪ್ಪುದಾರಿಗೆಳೆಯುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
2023ರಲ್ಲಿ ಚಿತ್ರೀಕರಣಗೊಂಡಿದೆ ಎನ್ನಲಾದ ವಿಡಿಯೋ, 2026ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವವರೆಗೆ ಯಾರ ವಶದಲ್ಲಿತ್ತು, ಯಾರಿಂದ ಯಾರಿಗೆ ವರ್ಗಾವಣೆಯಾಯಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ವಿಡಿಯೋವನ್ನು ಅಪ್ಲೋಡ್ ಮಾಡಲು ಅನಾಮಧೇಯ ಖಾತೆಗಳು, ವಿಪಿಎನ್ಗಳು, ಮರೆಮಾಚಿದ ಐಪಿ ವಿಳಾಸಗಳು ಹಾಗೂ ನಕಲಿ ಡಿಜಿಟಲ್ ಗುರುತುಗಳನ್ನು ಬಳಸಿರುವ ಸುಳಿವುಗಳು ದೊರೆತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಡಿಜಿಟಲ್ ಚಟುವಟಿಕೆಗಳ ಕೆಲವು ಕುರುಹುಗಳು ಕರ್ನಾಟಕದ ಹೊರಗಿನ ಸ್ಥಳಗಳೊಂದಿಗೆ ಸಂಪರ್ಕ ಹೊಂದಿವೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿಯೊಬ್ಬರು ಸ್ವತಂತ್ರ ಸಾಮಾಜಿಕ ಜಾಲತಾಣ ವಿಷಯ ಸೃಷ್ಟಿಕರ್ತರಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ನವದೆಹಲಿಯಲ್ಲಿ ನೆಲೆಸಿರುವ ರಾಜಕೀಯ ಸಂಪರ್ಕ ಹೊಂದಿರುವ ಕೆಲವು ವ್ಯಕ್ತಿಗಳೊಂದಿಗೆ ಅವರ ಸಂಬಂಧಗಳಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ಸಂಬಂಧಗಳ ಸ್ವರೂಪ ಮತ್ತು ಪ್ರಕರಣದೊಂದಿಗಿನ ನಂಟಿನ ಬಗ್ಗೆ ತನಿಖೆ ಮುಂದುವರಿದಿದೆ.
ರಾಜ್ಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳ ಘನತೆಗೆ ಧಕ್ಕೆ ತರುವುದು, ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸುವುದು ಹಾಗೂ ರಾಜಕೀಯ ವಿವಾದ ಸೃಷ್ಟಿಸುವ ಉದ್ದೇಶದಿಂದ ವಿಡಿಯೋ ಪ್ರಸಾರವಾಗಿರುವ ಸಾಧ್ಯತೆಯನ್ನು ಸೂಚಿಸುವ ಸುಳಿವುಗಳು ಲಭ್ಯವಾಗಿವೆ ಎಂದು ಸಿಸಿಬಿ ತಿಳಿಸಿದೆ.
ಒಟ್ಟಿನಲ್ಲಿ, ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಹಲವು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಆದರೆ, ವಿಧಿವಿಜ್ಞಾನ ವರದಿ ಮತ್ತು ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ಸೇರಿದಂತೆ ತನಿಖೆಯ ಮುಂದಿನ ಹಂತಗಳು ಬಾಕಿ ಇರುವುದರಿಂದ ಪ್ರಕರಣದ ಅಂತಿಮ ಸತ್ಯಾಸತ್ಯತೆ ತನಿಖೆಯ ಪೂರ್ಣ ವರದಿಯಿಂದ ಸ್ಪಷ್ಟವಾಗಬೇಕಿದೆ.
