‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಸಿದ್ದರಾಮಯ್ಯ ಘೋಷಣೆ

Untitled design 2026 02 03T134026.180

ಬೆಂಗಳೂರು: ನಟ ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಕನ್ನಡ ಚಿತ್ರ ‘ಲ್ಯಾಂಡ್ ಲಾರ್ಡ್’ ಗೆ ರಾಜ್ಯ ಸರ್ಕಾರ ಬೆಂಬಲ ನೀಡಿದೆ. ಚಿತ್ರದ ಸಾಮಾಜಿಕ ಕಳಕಳಿ, ಗಂಭೀರ ವಿಷಯವಸ್ತು ಮತ್ತು ಸಮಾಜಕ್ಕೆ ನೀಡುವ ಸಂದೇಶವನ್ನು ಪರಿಗಣಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಚಿತ್ರಕ್ಕೆ ರಾಜ್ಯ ಜಿಎಸ್‌ಟಿ (SGST) ಯಿಂದ ತೆರಿಗೆ ವಿನಾಯಿತಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ವಿಚಾರಗಳನ್ನಿಟ್ಟುಕೊಂಡು ಮೂಡಿಬರುವ ಚಿತ್ರಗಳು ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ‘ಲ್ಯಾಂಡ್ ಲಾರ್ಡ್’ ಸರ್ಕಾರದ ಗಮನ ಸೆಳೆದಿರುವುದು ವಿಶೇಷ. ಈ ಚಿತ್ರವು ಭೂ ಸುಧಾರಣೆ, ರೈತರ ಹೋರಾಟ, ಗ್ರಾಮೀಣ ಭಾಗದ ಸಮಸ್ಯೆಗಳು ಹಾಗೂ ಸಾಮಾಜಿಕ ಅಸಮಾನತೆಗಳಂತಹ ಗಂಭೀರ ವಿಷಯಗಳನ್ನು ಒಳಗೊಂಡಿದೆ ಎಂದು ಹೇಳಲಾಗುತ್ತಿದೆ. ಇಂತಹ ವಿಚಾರಗಳನ್ನು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುವ ಉದ್ದೇಶದಿಂದ ತೆರಿಗೆ ವಿನಾಯಿತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.

ನಟ ದುನಿಯಾ ವಿಜಯ್ ಅವರು ಈ ಚಿತ್ರದ ತೆರಿಗೆ ವಿನಾಯಿತಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು. ಚಿತ್ರದ ಕಥಾವಸ್ತು ಮತ್ತು ಅದರ ಸಾಮಾಜಿಕ ಪರಿಣಾಮವನ್ನು ಪರಿಶೀಲಿಸಿದ ಬಳಿಕ, ಸರ್ಕಾರ ಈ ಮನವಿಗೆ ಸ್ಪಂದನೆ ನೀಡಿದೆ. ಇದರೊಂದಿಗೆ ಸರ್ಕಾರ ಸಾಮಾಜಿಕ ಕಳಕಳಿಯ ಸಿನೆಮಾಗಳ ಬೆಂಬಲಕ್ಕೆ ನಿಂತಿದೆ ಎಂಬ ಸಂದೇಶವೂ ಸ್ಪಷ್ಟವಾಗಿದೆ.

ತೆರಿಗೆ ವಿನಾಯಿತಿ ಸಿಕ್ಕಲ್ಲಿ, ಚಿತ್ರಮಂದಿರಗಳಲ್ಲಿ ಟಿಕೆಟ್ ದರ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಸಾಮಾನ್ಯ ಜನರಿಗೆ ಕಡಿಮೆ ವೆಚ್ಚದಲ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಲಭಿಸಲಿದೆ. ಅದರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಖ ಮಾಡುವ ನಿರೀಕ್ಷೆಯೂ ಇದೆ.

ಈ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಾಮಾಜಿಕ ಅಸಮಾನತೆ ಹಾಗೂ ಜಾತಿಯಾಧಾರಿತ ಶೋಷಣೆ ವಿಷಯವನ್ನು ಆಧರಿಸಿದ ದುನಿಯಾ ವಿಜಯ್ ನಾಯಕತ್ವದ ‘ಲ್ಯಾಂಡ್ ಲಾರ್ಡ್’ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮೌಲ್ಯಯುತ ಸಂದೇಶವನ್ನು ಜನರಿಗೆ ತಲುಪಿಸಲು ಮತ್ತು ಸಾರ್ವತ್ರಿಕ ಅಭಿಪ್ರಾಯ ರೂಪಿಸಲು ಸಿನಿಮಾ ಅತ್ಯಂತ ಪರಿಣಾಮಕಾರಿ ಮಾಧ್ಯಮ. ಸಾಮಾಜಿಕ ಕಳಕಳಿಯ ಸಿನಿಮಾವನ್ನು ಮಾಡಿದವರ ಜೊತೆ ಸರ್ಕಾರ ನಿಲ್ಲುವುದು ನಮ್ಮ ನೈತಿಕ ಹೊಣೆ ಎಂದು ಹೇಳಿದ್ದಾರೆ.

ಮುಂದುವರೆದು ಅವರು, ಸಾಮಾಜಿಕ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ‘ಲ್ಯಾಂಡ್ ಲಾರ್ಡ್’ ನಂತಹ ಇನ್ನಷ್ಟು ಚಿತ್ರಗಳು ಮುಂದಿನ ದಿನಗಳಲ್ಲಿ ಮೂಡಿಬರಲು ಈ ನಿರ್ಧಾರ ಸ್ಪೂರ್ತಿಯಾಗಲಿದೆ ಎಂಬ ನಂಬಿಕೆ ನನಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Exit mobile version