ಬೆಂಗಳೂರು: ದೀಪಾವಳಿ ಹಬ್ಬ ಮತ್ತು ಸುದೀರ್ಘ ರಜೆಯ ಕಾರಣ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಜನರು ಅಧಿಕ ಸಂಖ್ಯೆಯಲ್ಲಿ ಪ್ರಯಾನಿಸುತ್ತಾರೆ.ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಿದೆ. ನವೆಂಬರ್ 17 ರಿಂದ 20 ರ ವರೆಗೆ ಮಧ್ಯಂತರದಲ್ಲಿ 2,500 ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ತರಲಿದೆ.
ಈ ಸಲದ ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಯಾಣಿಕರಿಗೆ ಸುದೀರ್ಘ ರಜೆಯ ಲಭಿಸಲಿದೆ. ನವೆಂಬರ್ 20ರಂದು ನರಕ ಚತುರ್ದಶಿ ಮತ್ತು ನವೆಂಬರ್ 22ರಂದು ಬಲಿಪಾಡ್ಯಮಿ ಹಬ್ಬವಿದೆ. ಇದರ ಜೊತೆಗೆ ನವೆಂಬರ್ 18 ಮತ್ತು 19ರಂದು ವಾರಾಂತ್ಯದ ರಜೆ ಇರುವುದರಿಂದ, ಬಹಳಷ್ಟು ಜನರು ನವೆಂಬರ್ 17ರಿಂದ 22ರ ವರೆಗೆ ಐದು ದಿನಗಳ ಸತತ ರಜೆಯನ್ನು ಪಡೆಯಲಿದ್ದಾರೆ.
ಪ್ರಯಾಣಿಕರ ಈ ಹೆಚ್ಚಳವನ್ನು ಸಮರ್ಥವಾಗಿ ನಿರ್ವಹಿಸುವ ಸಲುವಾಗಿ ಕೆಎಸ್‌ಆರ್‌ಟಿಸಿ ವಿಶೇಷ ಕಾರ್ಯಯೋಜನೆ ಹಾಕಿಕೊಂಡಿದೆ. ಬೆಂಗಳೂರಿನ ಮೂರು ಪ್ರಮುಖ ಬಸ್ ನಿಲ್ದಾಣಗಳಿಂದ ಈ ಹೆಚ್ಚುವರಿ ಬಸ್ಗಳು ಕಾರ್ಯಾಚರಣೆಗೆ ತರಲಿವೆ.
-
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್)
-
ಮೈಸೂರು ರಸ್ತೆ ಬಸ್ ನಿಲ್ದಾಣ
-
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣ
ಈ ಹೆಚ್ಚುವರಿ ಬಸ್ಗಳು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಿಗೆ ಪ್ರಯಾಣಿಕರನ್ನು ತಲುಪಿಸುವುದರ ಜೊತೆಗೆ, ಹಬ್ಬದ ನಂತರ ಮತ್ತೆ ಬೆಂಗಳೂರು ಮರಳುವವರರಿಗೂ ಬಸ್‌ಗಳನ್ನ ಏರ್ಪಡಿಸಲಾಗಿದೆ. ಹಬ್ಬದ ನಂತರ ಬೆಂಗಳೂರು ಮರಳುವ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ಸಲುವಾಗಿ, ಈ ವಿಶೇಷ ಬಸ್ಗಳು ನವೆಂಬರ್ 22 ಮತ್ತು 26ರಂದು ವಿವಿಧ ನಗರಗಳಿಂದ ಬೆಂಗಳೂರಿಗೆ ಬರಲಿವೆ.
ಪ್ರಯಾಣಿಕರು ತಡವಾಗಿ ಬಂದು ಟಿಕೆಟ್ ಸಿಗದೆ ತೊಂದರೆಗೊಳಗಾಗದಂತೆ, ಕೆಎಸ್ಆರ್ಟಿಸಿ ಮುಂಗಡ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಪ್ರಯಾಣಿಕರು ಕೆಎಸ್ಆರ್ಟಿಸಿಯ ಅಧಿಕೃತ ವೆಬ್ಸೈಟ್ www.ksrtc.karnataka.gov.in ಗೆ ಭೇಟಿ ನೀಡಿ ತಮ್ಮ ಬಸ್ ಟಿಕೆಟ್ಗಳನ್ನು ಮುಂಚಿತವಾಗಿ ಕಾಯ್ದಿರಿಸಿಕೊಳ್ಳಬಹುದು. ಈ ವೆಬ್ಸೈಟ್ ಮೂಲಕ ಬಸ್‌ಗಳ ಕಾರ್ಯಾಚರಣೆ ಮತ್ತು ವೇಳಾಪಟ್ಟಿ ಸಂಬಂಧಿ ಎಲ್ಲಾ ಮಾಹಿತಿಯನ್ನು ಪಡೆಯಬಹುದು. ಹಬ್ಬದ ಸಮಯದಲ್ಲಿ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಮುಂಗಡ ಟಿಕೆಟ್ ಬುಕಿಂಗ್ ಅತ್ಯಂತ ಉಪಯುಕ್ತವಾಗಿದೆ.