ನೀವು ಮೇ 20ರ ಬುಧವಾರದಂದು ಎಲ್ಲಾದರೂ ಹೊರಡಲು ಪ್ಲಾನ್ ಮಾಡಿಕೊಂಡಿದ್ದೀರಾ? ಅದಕ್ಕಾಗಿ ಈಗಾಗಲೇ ಬಸ್ ಟಿಕೆಟ್ ಬುಕ್ ಮಾಡಿದ್ದೀರಾ? ಹಾಗಿದ್ದರೆ ನಿಮ್ಮ ಪ್ಲಾನ್ ಅನ್ನು ತಕ್ಷಣವೇ ಬದಲಾಯಿಸಿಕೊಳ್ಳಿ. ಏಕೆಂದರೆ ಮೇ 20ರ ಬುಧವಾರ ಮುಂಜಾನೆ 6 ಗಂಟೆಯಿಂದ ಇಡೀ ರಾಜ್ಯಾದ್ಯಂತ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದೆ. ಸರ್ಕಾರಿ ಬಸ್‌ಗಳನ್ನು ನಂಬಿಕೊಂಡು ಮನೆ ಬಿಟ್ಟರೆ ನೀವಿರೋ ಜಾಗದಲ್ಲೇ ಲಾಕ್ ಆಗುವುದು ನೂರಕ್ಕೆ ನೂರು ಸತ್ಯ! ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಹೂಡಿರುವ ರಣಕಹಳೆಗೆ ಇಡೀ ರಾಜ್ಯ ಸಾರಿಗೆ ವ್ಯವಸ್ಥೆಯೇ ನಡುಗುವ ಸ್ಥಿತಿ ನಿರ್ಮಾಣವಾಗಿದೆ.
ಸಂಧಾನ ಸಭೆ ಕಂಪ್ಲೀಟ್ ಫ್ಲಾಪ್!
ವೇತನ ಪರಿಷ್ಕರಣೆಗಾಗಿ ಪಟ್ಟು ಹಿಡಿದಿರುವ ಸಾರಿಗೆ ನೌಕರರ ಮನವೊಲಿಸಲು ಕಾರ್ಮಿಕ ಇಲಾಖೆ ನಡೆಸಿದ ಸಂಧಾನ ಸಭೆಯು ಸಂಪೂರ್ಣವಾಗಿ ವಿಫಲವಾಗಿದೆ. “38 ತಿಂಗಳ ಹಿಂಬಾಕಿ ವೇತನ ಬಿಡುಗಡೆ ಮಾಡಬೇಕು ಹಾಗೂ ಜನವರಿ 2024 ರಿಂದ ಶೇಕಡಾ 25ರಷ್ಟು ವೇತನ ಪರಿಷ್ಕರಣೆ ಮಾಡಬೇಕು” ಎಂಬುದು ನೌಕರರ ಮುಖ್ಯ ಬೇಡಿಕೆಯಾಗಿತ್ತು. ಆದರೆ, ಐದಾರು ಸಭೆಗಳ ಬಳಿಕ ಸರ್ಕಾರ ಜೂನ್ 2025 ರಿಂದ ಜಾರಿಗೆ ಬರುವಂತೆ ಕೇವಲ ಶೇ. 12.5 ರಷ್ಟು ವೇತನ ಪರಿಷ್ಕರಣೆಯನ್ನು ಏಕಪಕ್ಷೀಯವಾಗಿ ಘೋಷಿಸಿರುವುದು ನೌಕರರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ “ಸ್ಟೇರಿಂಗ್ ಹಿಡಿಯಲ್ಲ, ಟಿಕೆಟ್ ಹರಿಯಲ್ಲ, ಸ್ಪಾನರ್ ಮುಟ್ಟೋದಿಲ್ಲ” ಎಂದು ನೌಕರರು ಖಡಕ್ ಆಗಿ ಸಾರಿದ್ದಾರೆ.
‘ನೋ ವರ್ಕ್ ನೋ ಸ್ಯಾಲರಿ’ ನೌಕರರ ಒಗ್ಗಟ್ಟು
ಇನ್ನೊಂದೆಡೆ ನೌಕರರು ಪಟ್ಟು ಸಡಿಲಿಸದ ಇರುವುದನ್ನು ಕಂಡ ಸರ್ಕಾರ ಮುಷ್ಕರ ಹತ್ತಿಕ್ಕಲು ‘ನೋ ವರ್ಕ್ ನೋ ಸ್ಯಾಲರಿ’ (No Work No Salary) ಆದೇಶ ಘೋಷಿಸಿದೆ. ಅಷ್ಟೇ ಅಲ್ಲದೆ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದ್ದರೂ ನಾವು ಯಾವುದಕ್ಕೂ ಹೆದರುವುದಿಲ್ಲ, ಮುಷ್ಕರ ಮಾಡಿಯೇ ಸಿದ್ಧ ಎಂದು ನೌಕರರ ಒಕ್ಕೂಟಗಳು ಗುಡುಗಿವೆ. “ಸರ್ಕಾರ ನಮ್ಮ ಒಗ್ಗಟ್ಟನ್ನು ಮುರಿಯಲು ಒಡಕಿನ ರಾಜಕೀಯ ಮಾಡುತ್ತಿದೆ, ಆದರೆ ನಾವ್ಯಾರೂ ಜಗ್ಗುವುದಿಲ್ಲ” ಎಂದು ನೌಕರರು ಸ್ಪಷ್ಟಪಡಿಸಿದ್ದಾರೆ.
ಪ್ರಯಾಣಿಕರ ರಕ್ಷಣೆಗೆ ಸರ್ಕಾರದ ‘ಪ್ಲಾನ್ ಬಿ’ ವ್ಯೂಹ!
ಒಂದು ವೇಳೆ ಮೇ 20ರಿಂದ ಸರ್ಕಾರಿ ಬಸ್‌ಗಳು ರಸ್ತೆಗೆ ಇಳಿಯದಿದ್ದರೆ ಪರಿಸ್ಥಿತಿಯನ್ನು ಹತೋಟಿಗೆ ತರಲು ಸಾರಿಗೆ ನಿಗಮಗಳು ಹಾಗೂ ಸರ್ಕಾರ ‘ಪ್ಲಾನ್ ಬಿ’ ಸಿದ್ಧಪಡಿಸಿಕೊಂಡಿವೆ:
ಖಾಸಗಿ ಬಸ್‌ಗಳ ಬಳಕೆ: ಸಾರ್ವಜನಿಕರ ಅನುಕೂಲಕ್ಕಾಗಿ ಖಾಸಗಿ ಬಸ್ ಮತ್ತು ಮ್ಯಾಕ್ಸಿ ಕ್ಯಾಬ್‌ಗಳನ್ನು ರಸ್ತೆಗಿಳಿಸಲು ಸಿದ್ಧತೆ.
ಮೆಟ್ರೋ ಸೇವೆ ಹೆಚ್ಚಳ: ನಮ್ಮ ಮೆಟ್ರೋ ರೈಲುಗಳ ಸಂಚಾರದ ಅವಧಿ ಮತ್ತು ಟ್ರಿಪ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದು.
ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆ: ಒಪ್ಪಂದದ ಆಧಾರದ ಮೇಲೆ ನಡೆಯುವ ಎಲೆಕ್ಟ್ರಿಕ್ ಬಸ್‌ಗಳನ್ನು ಗರಿಷ್ಠ ಮಟ್ಟದಲ್ಲಿ ಓಡಿಸುವುದು.
ನಾಳೆ ಮಧ್ಯಾಹ್ನವೇ ಸುಖಾಂತ್ಯದ ಕೊನೆಯ ಅವಕಾಶ: “ನಾಳೆ (ಮಂಗಳವಾರ) ಮಧ್ಯಾಹ್ನದೊಳಗೆ ಮುಖ್ಯಮಂತ್ರಿಗಳು ಸಭೆ ಕರೆದು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಮುಷ್ಕರ ವಾಪಸ್ ಪಡೆಯುತ್ತೇವೆ” ಎಂದು ನೌಕರರು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ನಾಳೆ ಸಭೆ ಕರೆದು ಈ ಬಿಕ್ಕಟ್ಟಿಗೆ ಸುಖಾಂತ್ಯ ಕಾಣಿಸುತ್ತಾರಾ ಅಥವಾ ಬುಧವಾರದಿಂದ ಇಡೀ ರಾಜ್ಯ ಸಾರಿಗೆ ಸ್ತಬ್ಧವಾಗಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.





