ದಾವಣಗೆರೆ: ಭೂಮಿಗೆ ಸೇರಿದ ನಂತರ ಕೊಳೆಯದ ಪ್ಲಾಸ್ಟಿಕ್ ಬಳಕೆಯ ಜೀವನಶೈಲಿಯನ್ನು ನಾವು ಬದಲಾಯಿಸಿಕೊಳ್ಳಬೇಕು ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಸೃಷ್ಟಿಸಲು ಹಂತ ಹಂತವಾಗಿ ಅದರ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್ಪಿಸಿಬಿ) ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಅವರು ಕರೆ ನೀಡಿದ್ದಾರೆ.
ದಾವಣಗೆರೆಯಲ್ಲಿ ನಡೆದ ಕೆಎಸ್ಪಿಸಿಬಿಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭವಿಷ್ಯಕ್ಕಾಗಿ ಶಿಕ್ಷಣ ಪಡೆಯುವುದು ಎಷ್ಟು ಮುಖ್ಯವೋ, ಭವಿಷ್ಯಕ್ಕಾಗಿ ಪರಿಸರವನ್ನು ಉಳಿಸುವುದು ಅಷ್ಟೇ ಮುಖ್ಯ. ಇದಕ್ಕೆ ಸಾರ್ವಜನಿಕರು ಮತ್ತು ಸ್ಥಳೀಯ ಆಡಳಿತದ ಸಹಕಾರ ಅತ್ಯಗತ್ಯ” ಎಂದು ಒತ್ತಿಹೇಳಿದರು.
“ಹಾಲಿನ ಪಾಕೆಟ್ ಅನ್ನು ಮೂಲೆಯಲ್ಲಿ ಕತ್ತರಿಸಿ ತುಣುಕನ್ನು ಎಸೆಯಲಾಗುತ್ತದೆ. ಇದು ಭೂಮಿ ಅಥವಾ ಪರಿಸರವನ್ನು ಸೇರುತ್ತದೆ. ಪ್ಲಾಸ್ಟಿಕ್ ಕೊಳೆಯುವ ಪದಾರ್ಥವಲ್ಲ ಮತ್ತು ಇಡೀ ಪ್ರಪಂಚಕ್ಕೆ ಅದು ಮಾರಕವಾಗಿದೆ. ಈ ಅಪಾಯದಿಂದ ಮುಕ್ತಿ ಪಡೆಯಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ,” ಎಂದರು ಅವರು.
ದಾವಣಗೆರೆ ಜಿಲ್ಲೆಯಲ್ಲಿ 69 ರೈಸ್ ಮಿಲ್‌ಗಳು ಮತ್ತು ಸುಮಾರು ಒಂದು ಸಾವಿರ ಮಂಡಕ್ಕಿ ತಯಾರಿಕಾ ಕೇಂದ್ರಗಳಿವೆ ಎಂದು ಹೇಳಿದ ಅವರು, ಇವು ವಾಯು ಮಾಲಿನ್ಯವನ್ನು ಹೆಚ್ಚಿಸುವ ಪ್ರಮುಖ ಮೂಲಗಳು ಎಂದು ಸೂಚಿಸಿದರು. ಮಂಡಕ್ಕಿ ತಯಾರಿಕಾ ಕೇಂದ್ರಗಳನ್ನು ಸ್ಥಳಾಂತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕಿದೆ ಎಂದರು.
ಜಲ ಮಾಲಿನ್ಯದ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ 396 ಕೈಗಾರಿಕೆಗಳಿಂದ ಹೊರಬರುವ ರಾಸಾಯನಿಕಯುಕ್ತ ನೀರು ತುಂಗಾ ಮತ್ತು ವರದಾ ನದಿಗಳನ್ನು ಮಾಲಿನ್ಯಗೊಳಿಸುತ್ತಿದೆ ಎಂದರು. ಈ ಸಮಸ್ಯೆಯನ್ನು ಪರಿಹರಿಸಲು ತುಂಗಾಭದ್ರಾ ನದಿಯ 15 ಕಡೆ ನೀರಿನ ಮಾದರಿ ಪರೀಕ್ಷೆ ಮಾಡಲಾಗುತ್ತಿದೆ ಮತ್ತು ಪ್ರತಿ ತಿಂಗಳು ನೀರಿನ ಗುಣಮಟ್ಟ ಪರೀಕ್ಷಿಸಲಾಗುತ್ತದೆ ಎಂದು ವಿವರಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1974ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಸ್ಥಾಪಿಸಿ, ಮಾಲಿನ್ಯ ನಿಯಂತ್ರಣಕ್ಕೆ ಮುನ್ನುಡಿ ಬರೆದರು ಎಂದು ನರೇಂದ್ರಸ್ವಾಮಿ ಅವರು ಸ್ಮರಿಸಿದರು. ಅವರು ವನ್ಯಜೀವಿ ಸಂರಕ್ಷಣಾ ಕಾಯ್ದೆ, ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ, ಮತ್ತು ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನು ಜಾರಿಗೆ ತಂದುದರ ಜೊತೆಗೆ ಪ್ರಾಜೆಕ್ಟ್ ಟೈಗರ್ ಅನ್ನು ರೂಪಿಸಿದ ಖ್ಯಾತಿ ಅವರದ್ದು ಎಂದರು.
ಕೆಎಸ್ಪಿಸಿಬಿ ತನ್ನ 50 ವರ್ಷಗಳ ಸೇವೆಯನ್ನು ಪೂರೈಸಿ ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ 15 ಕಡೆ ಬೃಹತ್ ಕಾರ್ಯಕ್ರಮಗಳು ಜರಗಿವೆ. ಜಿಲ್ಲಾ ಮಟ್ಟದಿಂದ ವಿಧಾನಸಭಾ ಕ್ಷೇತ್ರ ಮಟ್ಟದವರೆಗೆ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಯುವ ಪೀಳಿಗೆಯಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮಗಳ ಪ್ರಮುಖ ಉದ್ದೇಶವಾಗಿದೆ. ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಮತ್ತು ವಿಜೇತರಿಗೆ 3,000 ರೂಪಾಯಿ ಬಹುಮಾನ ನೀಡಲಾಗುವುದು. ಹೆಚ್ಚು ಯುವಜನತೆಯನ್ನು ತಲುಪಲು ‘ಪರಿಸರದ ಬಗ್ಗೆ ರೀಲ್ಸ್ ಮಾಡಿ ಬಹುಮಾನ ಗೆದಿಯಿರಿ’ ಎಂಬ ಕಾರ್ಯಕ್ರಮವನ್ನೂ ಶುರುಮಾಡಲಾಗಿದೆ. ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಮೊದಲ, ಎರಡನೇ ಮತ್ತು ಮೂರನೇ ಸ್ಥಾನಗಳಿಗೆ ಕ್ರಮವಾಗಿ 50,000, 25,000 ಮತ್ತು 10,000 ರೂಪಾಯಿ ಬಹುಮಾನ ನೀಡಲಾಗುವುದು.
ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುವ ವ್ಯಕ್ತಿಗಳು ಮತ್ತು ಸಂಘಸಂಸ್ಥೆಗಳನ್ನು ಗುರುತಿಸಿ ‘ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿ’ ನೀಡಲಾಗುವುದು ಎಂದು ನರೇಂದ್ರಸ್ವಾಮಿ ಅವರು ಘೋಷಿಸಿದರು. ಈ ಎಲ್ಲಾ ಕಾರ್ಯಕ್ರಮಗಳ ಅಂತಿಮ ಸಮಾರೋಪ ಸಮಾರಂಭ ನವೆಂಬರ್ 18 ಮತ್ತು 19ರಂದು ನಡೆಯುವುದು ಎಂದು ಹೇಳಿದ್ದಾರೆ.





