ಬೆಂಗಳೂರು, ನ 29, 2025: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ಚುನಾವಣೆಗೆ ನಾನು ಸ್ಪರ್ಧೆ ಮಾಡಲು ಹೈಕೋರ್ಟ್ ಹಸಿರು ನಿಶಾನೆ ತೋರಿಸಿರುವುದರಿಂದ, ನಾನೀಗ ನಿರಾಳನಾಗಿದ್ದೇನೆ. ಕೋರ್ಟ್ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಚುನಾವಣೆಗೆ ಬೇಕಿರುವ ಅಗತ್ಯ ಸಿದ್ಧತೆಗಳನ್ನು ನಮ್ಮ ತಂಡ ಮಾಡಿಕೊಳ್ಳುತ್ತಿದೆ ಎಂದು ಕೆಎಸ್‌ಸಿಎ ಅಧ್ಯಕ್ಷ ಆಕಾಂಕ್ಷಿ ಕೆ.ಎನ್. ಶಾಂತಕುಮಾರ್ ಹೇಳಿದ್ದಾರೆ.
ಕೆಎಸ್‌ಸಿಎ ಚುನಾವಣಾಧಿಕಾರಿ ತಮ್ಮ ನಾಮಪತ್ರ ತಿರಸ್ಕರಿಸಿದ್ದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಶಾಂತಕುಮಾರ್, ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ತಮ್ಮ ಪರ ತೀರ್ಪು ನೀಡಿದ ಬಳಿಕ ಈ ಹೇಳಿಕೆ ನೀಡಿದ್ದಾರೆ. ಪೂರ್ವ ನಿಗದಿಯಂತೆ ಇದೇ ಡಿಸೆಂಬರ್ 7 ರಂದು ಕೆಎಸ್‌ಸಿಎ ಚುನಾವಣೆ ನಡೆಯಲಿದ್ದು, ಶಾಂತಕುಮಾರ್ ಎಲ್ಲಾ ರೀತಿಯ ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ.





