ಬೆಂಗಳೂರು: ಕೆಪಿಸಿಸಿ ಕಚೇರಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಮುಂದಾದ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿದರು.
ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿದ ಅವರು, ಬಿಜೆಪಿ ನಾಯಕರು ಕರೆ ನೀಡಿ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಬಂದಿದ್ದರು ಎಂದರು. ಬಿಜೆಪಿ ಶಾಸಕ ಬಿ.ಪಿ. ಹರೀಶ್ ಕಾಂಗ್ರೆಸ್ ಕಚೇರಿ ಬಳಿ ಬಂದಿದ್ದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು ಎಂದು ಸ್ಪಷ್ಟಪಡಿಸಿದರು.
ಮೊಟ್ಟೆ ಎಸೆತದ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, “ಬಿಜೆಪಿಗರ ಮೇಲೆ ನಮ್ಮ ಕಾರ್ಯಕರ್ತರು ಮೊಟ್ಟೆ ಎಸೆದಿಲ್ಲ. ಅವರೇ ಬೇಕಂತಲೇ ಮೊಟ್ಟೆ ಎಸೆದುಕೊಂಡಿರಬಹುದು. ಮೊದಲಿಗೆ ಬಿಜೆಪಿ ಕಾರ್ಯಕರ್ತರೇ ಮೊಟ್ಟೆ ಎಸೆದಿದ್ದಾರೆ. ಬಳಿಕ ನಮ್ಮ ಕಾರ್ಯಕರ್ತರು ಪ್ರತಿಕ್ರಿಯೆ ನೀಡಿದ್ದಾರೆ,” ಎಂದು ಹೇಳಿದರು. ಈ ಘಟನೆಯನ್ನು ರಾಜಕೀಯ ಲಾಭಕ್ಕಾಗಿ ಬಿಜೆಪಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
“ಕೆಪಿಸಿಸಿ ಕಚೇರಿ ನಮ್ಮ ಕಾರ್ಯಕರ್ತರಿಗೆ ದೇವಾಲಯ ಇದ್ದಂತೆ. ಅಂತಹ ಕಚೇರಿಯ ಮೇಲೆ ದಾಳಿ ಮಾಡಲು ಯಾರಾದರೂ ಬಂದರೆ ಕಾರ್ಯಕರ್ತರು ಸುಮ್ಮನೆ ನೋಡುತ್ತ ಕುಳಿತುಕೊಳ್ಳುವುದಿಲ್ಲ. ಪಕ್ಷಕ್ಕಾಗಿ ಪ್ರಾಣ ಕೊಡಲೂ ನಮ್ಮ ಕಾರ್ಯಕರ್ತರು ಸಿದ್ಧರಿದ್ದಾರೆ,” ಎಂದು ಹರಿಪ್ರಸಾದ್ ಹೇಳಿದರು.
ಇದೇ ವೇಳೆ ಬಿಜೆಪಿ ಶಾಸಕ ಆರ್. ಅಶೋಕ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಅವರು, “ಕಾಂಗ್ರೆಸ್ ಕಚೇರಿಯಲ್ಲಿ ಲಾಂಗು, ಮಚ್ಚು, ಬಾಂಬ್ ಇವೆ ಎಂದು ಹೇಳಿರುವುದು ಸಂಪೂರ್ಣ ಬೇಜವಾಬ್ದಾರಿಯ ಹೇಳಿಕೆ. ಕೇಂದ್ರದಲ್ಲಿ ಅವರದೇ ಸರ್ಕಾರ ಇದೆ. ಅಂತಹ ಅನುಮಾನ ಇದ್ದರೆ ತನಿಖೆ ನಡೆಸಲಿ. ಪಾಕಿಸ್ತಾನದಿಂದ ಬಂದ ಆರ್‌ಡಿಎಕ್ಸ್ ಎಲ್ಲಿಂದ ಬಂತು ಎಂಬುದನ್ನೂ ದೇಶಕ್ಕೆ ತಿಳಿಸಲಿ,” ಎಂದು ಸವಾಲು ಹಾಕಿದರು.
“ಮೊಟ್ಟೆ ನೋಡಿದರೂ ಬಾಂಬ್ ಎಂದು ಹೇಳುವವರನ್ನು ಮೆಚ್ಚಲೇಬೇಕು. ಪಶ್ಚಿಮ ಬಂಗಾಳದಲ್ಲಿ ಮೊಟ್ಟೆ ಎಸೆದವರು ಯಾರು ಎಂಬುದಕ್ಕೂ ಉತ್ತರ ನೀಡಬೇಕು. ಬಿಜೆಪಿ ನಾಯಕರು ಹಿಂಸೆಯನ್ನು ಪ್ರಚೋದಿಸಿ, ಅರಾಜಕತೆ ಸೃಷ್ಟಿಸುವ ರಾಜಕಾರಣ ಮಾಡುತ್ತಿದ್ದಾರೆ. ದೇಶಾದ್ಯಂತ ಪ್ರತಿಭಟನೆ ನಡೆಸುವಂತೆ ಕರೆ ನೀಡಿರುವುದು ಅವರ ರಾಜಕೀಯ ತಂತ್ರದ ಭಾಗವಾಗಿದೆ,” ಎಂದು ವಾಗ್ದಾಳಿ ನಡೆಸಿದರು.
ಪ್ರಜಾಪ್ರಭುತ್ವದಲ್ಲಿ ವಿಪಕ್ಷ ನಾಯಕರಿಗೆ ಅತ್ಯಂತ ಮಹತ್ವದ ಸ್ಥಾನವಿದ್ದು, ಅವರನ್ನು “ಶ್ಯಾಡೋ ಪ್ರಧಾನಮಂತ್ರಿ” ಎಂದೇ ಪರಿಗಣಿಸಲಾಗುತ್ತದೆ. ಆದರೆ ಕೇಂದ್ರ ಸರ್ಕಾರ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು, ಅಶ್ರುವಾಯು ಸಿಡಿಸಿ ಹೆಣ್ಣುಮಕ್ಕಳ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ಹರಿಪ್ರಸಾದ್ ಆರೋಪಿಸಿದರು. ಗಾಯಗೊಂಡ ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಸಹ ಅವಕಾಶ ನೀಡಲಿಲ್ಲ ಎಂದು ಅವರು ಟೀಕಿಸಿದರು. ಇದೇ ಘಟನೆಯನ್ನು ಖಂಡಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರತಿಭಟನೆ ನಡೆಸಿದಾಗ, ಪ್ರಧಾನಿ ನಿವಾಸದ ಬಳಿ ಪ್ರತಿಭಟಿಸಲು ಮುಂದಾದ ಅವರನ್ನು ತಡೆಯಲು ಬಲಪ್ರಯೋಗ ಮಾಡಲಾಗಿದೆ ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರತಿಭಟನೆಯ ವೇಳೆ ಸ್ಥಳದಲ್ಲಿದ್ದ ಕೆಲವರು ಪೊಲೀಸರಂತೆ ಕಾಣುತ್ತಿರಲಿಲ್ಲ ಎಂದು ಹೇಳಿದ ಹರಿಪ್ರಸಾದ್, ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
