ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಗಜಪಡೆಗಳನ್ನು ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗುತ್ತಿದ್ದು, ಇದೀಗ ಆನೆಗಳಿಗೆ ಭಾರ ಹೊರುವ ತಾಲೀಮು ಆರಂಭವಾಗಿದೆ. ಅರಮನೆ ಆವರಣದಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ನಡೆಯುತ್ತಿರುವ ಈ ತಾಲೀಮಿನಲ್ಲಿ ಮೊದಲ ಹಂತವಾಗಿ ಮಹೇಂದ್ರ ಆನೆಗೆ ಭಾರ ಹೊರಿಸಿ ಅಭ್ಯಾಸ ಮಾಡಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಭುಗೌಡ ಅವರ ನೇತೃತ್ವದಲ್ಲಿ ನಡೆದ ತಾಲೀಮಿನಲ್ಲಿ ಮಹೇಂದ್ರ ಆನೆ ಒಟ್ಟು 700 ಕೆಜಿ ಭಾರವನ್ನು ಹೊತ್ತು ಗಾಂಭೀರ್ಯದಿಂದ ಹೆಜ್ಜೆ ಹಾಕಿದೆ. ಇದರಲ್ಲಿ 350 ಕೆಜಿ ಮರಳಿನ ಮೂಟೆ ಹಾಗೂ ಉಳಿದ 350 ಕೆಜಿ ತೂಕದ ನಮ್ದಾ, ಗಾದಿ, ಚಾಪು ಮತ್ತು ಕಬ್ಬಿಣದ ತೊಟ್ಟಿಲು ಸೇರಿದಂತೆ ಅಂಬಾರಿ ಹೊರುವ ವೇಳೆ ಬಳಸಲಾಗುವ ಪರಿಕರಗಳನ್ನು ಇರಿಸಲಾಗಿತ್ತು.
ಭಾರವನ್ನು ಹೊತ್ತು ಸಾಗಿದ ಮಹೇಂದ್ರನಿಗೆ ಲಕ್ಷ್ಮೀ ಹಾಗೂ ಕಾವೇರಿ ಆನೆಗಳು ಸಾಥ್ ನೀಡಿದವು. ಆನೆಗಳಿಗೆ ಏಕಾಏಕಿ ಹೆಚ್ಚಿನ ಭಾರ ನೀಡದೆ ಹಂತ ಹಂತವಾಗಿ ತೂಕ ಹೆಚ್ಚಿಸುವ ಮೂಲಕ ಅವುಗಳ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತಿದೆ. ಪ್ರತಿದಿನದ ತಾಲೀಮಿನಲ್ಲಿ ಆನೆಗಳ ನಡಿಗೆ, ವರ್ತನೆ, ದೈಹಿಕ ಸಾಮರ್ಥ್ಯ ಹಾಗೂ ಭಾರ ಹೊತ್ತ ಸಂದರ್ಭದಲ್ಲಿ ಅವುಗಳ ಹೊಂದಾಣಿಕೆಯನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
2026ರ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆಯ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಪ್ರಸ್ತುತ ಮಹೇಂದ್ರ, ಪ್ರಶಾಂತ, ಏಕಲವ್ಯ ಹಾಗೂ ಧನಂಜಯ ಆನೆಗಳು ಅಂಬಾರಿ ಹೊರುವ ರೇಸ್‌ನಲ್ಲಿವೆ. ಈ ನಾಲ್ಕು ಆನೆಗಳಿಗೂ ಹಂತ ಹಂತವಾಗಿ ಭಾರದ ತಾಲೀಮು ನಡೆಸಿ, ಅವುಗಳ ಸಾಮರ್ಥ್ಯವನ್ನು ಪರಿಶೀಲಿಸಿದ ಬಳಿಕ ಅಂತಿಮವಾಗಿ ಸೂಕ್ತ ಆನೆಯನ್ನು ಆಯ್ಕೆ ಮಾಡಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಡಿಸಿಎಫ್ ಪ್ರಭುಗೌಡ, ಮೊದಲ ಹಂತವಾಗಿ ಮಹೇಂದ್ರ ಆನೆಗೆ ಭಾರ ಹೊರುವ ತಾಲೀಮು ಆರಂಭಿಸಲಾಗಿದೆ. ಸಂಪೂರ್ಣ ತರಬೇತಿ ಪೂರ್ಣಗೊಂಡ ಬಳಿಕವೇ ಅಂಬಾರಿ ಹೊರುವ ಅಂತಿಮ ಆನೆಯ ಆಯ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಗಜಪಡೆಯ ಎಲ್ಲ ಆನೆಗಳ ಆರೋಗ್ಯದ ಮೇಲೂ ಅರಣ್ಯ ಇಲಾಖೆ ವಿಶೇಷ ಗಮನ ಹರಿಸುತ್ತಿದೆ. ಆನೆಗಳಿಗೆ ಅಗತ್ಯ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಹಾಗೂ ಪೂರಕ ಆಹಾರ ನೀಡಲಾಗುತ್ತಿದ್ದು, ತಾಲೀಮಿನ ಸಂದರ್ಭದಲ್ಲಿ ಅವುಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.
2026ರ ದಸರಾ ಗಜಪಡೆಯ ಮೊದಲ ತಂಡದಲ್ಲಿ ಒಂಬತ್ತು ಆನೆಗಳು ಮೈಸೂರಿಗೆ ಆಗಮಿಸಿವೆ. ಶ್ರೀಕಂಠ, ಏಕಲವ್ಯ, ಧನಂಜಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಲಕ್ಷ್ಮೀ ಹಾಗೂ ಕಾವೇರಿ ಮೊದಲ ಹಂತದ ತಂಡದಲ್ಲಿವೆ. ಇತ್ತೀಚಿನ ತೂಕ ಪರೀಕ್ಷೆಯಲ್ಲಿ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಹೇಂದ್ರ 5,490 ಕೆಜಿ ತೂಕ ದಾಖಲಿಸಿದ್ದಾನೆ.
ಇನ್ನು ಎರಡನೇ ತಂಡದ ಆನೆಗಳು ಹಾಗೂ ಅಭಿಮನ್ಯು ಆನೆಯನ್ನು ಅರಮನೆಗೆ ಕರೆತರುವ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಂಬೂಸವಾರಿ ದಿನದಂದು ಯಾವುದೇ ಅಡಚಣೆ ಎದುರಾಗದಂತೆ ಗಜಪಡೆಯನ್ನು ಹಂತ ಹಂತವಾಗಿ ತರಬೇತಿಗೊಳಿಸಿ ಸಂಪೂರ್ಣವಾಗಿ ಸಜ್ಜುಗೊಳಿಸುವ ಕಾರ್ಯ ಮುಂದುವರಿದಿದೆ.
