ಕೊಪ್ಪಳ: ಕೊಪ್ಪಳದ ಸುಪ್ರಸಿದ್ಧ ಗವಿಮಠದ ಜಾತ್ರೆಯೆಂದರೆ ಅಲ್ಲಿ ಲಕ್ಷಾಂತರ ಭಕ್ತರ ಸಮೂಹವೇ ಸೇರುತ್ತದೆ. ಇಂತಹ ಜನದಟ್ಟಣೆಯನ್ನೇ ನಂಬಿ ಹೊಟ್ಟೆಪಾಡಿಗಾಗಿ ಮದ್ಯಪ್ರದೇಶದಿಂದ ಬಂದಿದ್ದ ಅಲೆಮಾರಿ ಕುಟುಂಬವೊಂದು ಈಗ ಸಂಕಷ್ಟಕ್ಕೆ ಸಿಲುಕಿದೆ. ಜೀವ ಪಣಕ್ಕಿಟ್ಟು ಸಾಹಸ ಪ್ರದರ್ಶನ ಮಾಡುತ್ತಿದ್ದ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಕಾನೂನು ಕ್ರಮದ ಅಡಿಯಲ್ಲಿ ಅಧಿಕಾರಿಗಳು ಮಗುವನ್ನು ರಕ್ಷಿಸಿದ್ದಾರೆ. ಆದರೆ ಈ ರಕ್ಷಣಾ ಕಾರ್ಯಾಚರಣೆಯ ವೇಳೆ ಅಚ್ಚರಿಯ ಸತ್ಯವೊಂದು ಬಯಲಾಗಿದೆ.
ಕಳೆದ ಕೆಲವು ದಿನಗಳಿಂದ ಗವಿಮಠದ ಜಾತ್ರೆಯಲ್ಲಿ ಹತ್ತು ವರ್ಷದ ಪುಟ್ಟ ಬಾಲಕಿಯೊಬ್ಬಳು ಅತ್ಯಂತ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸುತ್ತಿದ್ದಳು. ಈ ವಿಡಿಯೋ ವೈರಲ್ ಆದ ಕೂಡಲೇ ಎಚ್ಚೆತ್ತ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಬಾಲಕಾರ್ಮಿಕ ಕಾಯ್ದೆಯಡಿ ಮಗುವನ್ನು ರಕ್ಷಿಸಿ, ಬಾಲಕಿಯರನ್ನು ಬಾಲ ಮಂದಿರಕ್ಕೆ ಕರೆದೊಯ್ದರು. ಅಲ್ಲಿ ದಾಖಲೆಗಳನ್ನು ಭರ್ತಿ ಮಾಡುವಾಗ ಪೋಷಕರು ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ. ಸಾಹಸ ಪ್ರದರ್ಶನದ ವೇಳೆ ಜನರ ಗಮನ ಸೆಳೆಯಲು ಮತ್ತು ಹೆಚ್ಚು ಹಣ ಗಳಿಸಲು ತಮ್ಮ 10 ವರ್ಷದ ಬಾಲಕನಿಗೆ ಹೆಣ್ಣಿನ ವೇಷಭೂಷಣ ತೊಡಿಸಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದಾರೆ. ಇದನ್ನು ಕೇಳಿ ಅಧಿಕಾರಿಗಳೇ ಒಂದು ಕ್ಷಣ ದಿಗ್ಭ್ರಮೆಗೊಂಡಿದ್ದಾರೆ.
ಮೂಲತಃ ಮಧ್ಯಪ್ರದೇಶದವರಾದ ಈ ಅಲೆಮಾರಿ ಕುಟುಂಬವು ಜೀವನೋಪಾಯಕ್ಕಾಗಿ ಊರೂರು ಅಲೆಯುತ್ತದೆ. ಜನರನ್ನು ಆಕರ್ಷಿಸಲು ಗಂಡು ಮಗುವಿಗೆ ಲಂಗ-ಜಾಕೆಟ್‌ನಂತಹ ಹೆಣ್ಣಿನ ಬಟ್ಟೆ ಹಾಕಿಸಿ ಸಾಹಸ ಮಾಡಿಸುತ್ತಿದ್ದರು. ಕೇವಲ ನಾಲ್ಕು ಕಾಸಿನ ಆಸೆಗಾಗಿ ಮಗುವಿನ ಜೀವವನ್ನು ಅಪಾಯಕ್ಕೆ ತಳ್ಳುತ್ತಿದ್ದರು. ಕಾನೂನಿನ ಪ್ರಕಾರ 14 ವರ್ಷದೊಳಗಿನ ಮಕ್ಕಳನ್ನು ಇಂತಹ ಅಪಾಯಕಾರಿ ಅಥವಾ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ಅಧಿಕಾರಿಗಳು ಕೂಡಲೇ ಬಾಲಕನನ್ನು ವಶಕ್ಕೆ ಪಡೆದು, ಬಾಲಕಿಯರ ಮಂದಿರದಿಂದ ಬಾಲಕರ ಮಂದಿರಕ್ಕೆ ಸ್ಥಳಾಂತರಿಸಿದ್ದಾರೆ.
ಭಾರತದ ಸಂವಿಧಾನದ ಪ್ರಕಾರ 6 ರಿಂದ 14 ವರ್ಷದ ಪ್ರತಿ ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದೆ. ಮಗುವನ್ನು ಕೆಲಸಕ್ಕೆ ಕಳುಹಿಸಿ ಅದರ ಭವಿಷ್ಯವನ್ನು ಹಾಳು ಮಾಡುತ್ತಿರುವುದನ್ನು ಗಮನಿಸಿದ ಮಕ್ಕಳ ರಕ್ಷಣಾ ಘಟಕ, ಮಗುವಿನ ಶೈಕ್ಷಣಿಕ ಹಿತದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ. ಸದ್ಯ ಮಗುವನ್ನು ಸುರಕ್ಷಿತವಾಗಿ ಇರಿಸಲಾಗಿದ್ದು, ಶೀಘ್ರದಲ್ಲೇ ಆತನ ಮೂಲ ಸ್ಥಳಕ್ಕೆ ಅಥವಾ ಶಿಕ್ಷಣ ಸಂಸ್ಥೆಗೆ ಕಳುಹಿಸುವ ಪ್ರಕ್ರಿಯೆ ಆರಂಭವಾಗಿದೆ.
ಒಂದು ವೈರಲ್ ವಿಡಿಯೋ ಅಲೆಮಾರಿ ಕುಟುಂಬದ ಬದುಕನ್ನೇ ಅಸ್ತವ್ಯಸ್ತಗೊಳಿಸಿದೆ. ಹೊಟ್ಟೆಪಾಡಿಗಾಗಿ ಮಗುವನ್ನು ಕಳೆದುಕೊಂಡ ಪೋಷಕರು ಒಂದೆಡೆಯಾದರೆ, ಮಗುವಿನ ಸುರಕ್ಷತೆಗಾಗಿ ಕೆಲಸ ಮಾಡಿದ ಅಧಿಕಾರಿಗಳು ಇನ್ನೊಂದೆಡೆ. ಈ ರೀತಿ ಹಣಕ್ಕಾಗಿ ಮಕ್ಕಳನ್ನ ಇಂತಹ ಚಟವಟಿಕೆಗಳಿಗೆ ಬಳಸಿಕೊಳ್ಳಬೇಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.





