ಕೇರಳ: ದೇಶದ ಪ್ರಮುಖ ಉದ್ಯಮ ಸಂಸ್ಥೆಯಾದ ಕಾನ್ಸಿಡೆಂಟ್ ಗ್ರೂಪ್ (Confident Group) ಮುಖ್ಯಸ್ಥ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣವು ಈಗ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಘಟನೆಯ ಹಿನ್ನೆಲೆ
ಜನವರಿ 30ರಂದು ಬೆಂಗಳೂರಿನಲ್ಲಿರುವ ಸಿಜೆ ರಾಯ್ ಅವರ ಕಚೇರಿಯ ಮೇಲೆ ಕೇರಳದ ಆದಾಯ ತೆರಿಗೆ (IT) ಅಧಿಕಾರಿಗಳು ಹಠಾತ್ ದಾಳಿ ನಡೆಸಿದ್ದರು. ಕಚೇರಿಯಲ್ಲಿ ಕೆಲವು ದಾಕಲೆಗಳನ್ನ ಪರಿಶೀಲಿಸಿ ಅವುಗಳನ್ನ ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದ್ದಾಗ, ಅಧಿಕಾರಿಗಳು ಕೇಳಿದ ಕೆಲವು ದಾಖಲೆಗಳನ್ನು ತರಲು ರಾಯ್ ಅವರು ತಮ್ಮ ವೈಯಕ್ತಿಕ ಚೇಂಬರ್‌ಗೆ ತೆರಳಿದ್ದರು. ಆದರೆ, ಅಲ್ಲಿಯೇ ತಮ್ಮ ಪರವಾನಗಿ (ಲೈಸೆನ್ಸ್) ಪಡೆದ ಪಿಸ್ತೂಲ್‌ನಿಂದ ಎದೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆಯು ಐಟಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಹಲವು ಅನುಮಾನಗಳನ್ನ ಹುಟ್ಟುಹಾಕಿದೆ.
ತೆರಿಗೆ ವ್ಯವಸ್ಥೆಯ ಮೇಲಿನ ಕಪ್ಪು ಚುಕ್ಕೆ-ಪಿಣರಾಯಿ ವಿಜಯನ್
ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ಯಶಸ್ವಿ ಉದ್ಯಮಿ ಈ ರೀತಿ ಸಾವನ್ನಪ್ಪಿರುವುದು ಭಾರತದ ತೆರಿಗೆ ಆಡಳಿತ ವ್ಯವಸ್ಥೆಯ ಮೇಲೆ ಬಿದ್ದ ಕಪ್ಪು ಚುಕ್ಕೆಯಾಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಐಟಿ ಅಧಿಕಾರಿಗಳು ದಾಳಿಯ ಸಂದರ್ಭದಲ್ಲಿ ಪಾಲಿಸಬೇಕಾದ ಶಿಷ್ಟಾಚಾರಗಳನ್ನು (Protocols) ಗಾಳಿಗೆ ತೂರಿದ್ದಾರೆ ಎಂಬ ವರದಿಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಐಟಿ ಅಧಿಕಾರಿಗಳ ಭದ್ರತಾ ಲೋಪದ ಬಗ್ಗೆ ಪ್ರಶ್ನೆಗಳು
ಮುಖ್ಯಮಂತ್ರಿಗಳು ತಮ್ಮ ಪತ್ರದಲ್ಲಿ ಅಧಿಕಾರಿಗಳ ಹೊಣೆಗಾರಿಕೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ:
-
ಸುರಕ್ಷತೆಯ ಜವಾಬ್ದಾರಿ: ಐಟಿ ಇಲಾಖೆಯು ಒಂದು ಆವರಣವನ್ನು ತನ್ನ ವಶಕ್ಕೆ ಪಡೆದ ಮೇಲೆ, ಅಲ್ಲಿನ ಪ್ರತಿಯೊಂದು ಚಟುವಟಿಕೆ ಮತ್ತು ವ್ಯಕ್ತಿಗಳ ಸುರಕ್ಷತೆಯ ಹೊಣೆಗಾರಿಕೆ ಅಧಿಕಾರಿಗಳ ಮೇಲಿರುತ್ತದೆ.
-
ಆಯುಧಗಳ ಲಭ್ಯತೆ: ತನಿಖೆ ನಡೆಯುತ್ತಿರುವಾಗಲೇ ವ್ಯಕ್ತಿಯೊಬ್ಬರು ತಮ್ಮ ಪಿಸ್ತೂಲ್ ಪಡೆಯಲು ಹೇಗೆ ಸಾಧ್ಯವಾಯಿತು ? ಇದು ಅಧಿಕಾರಿಗಳ ಕಣ್ಣೆದುರೇ ನಡೆದ ಗಂಭೀರ ಭದ್ರತಾ ಲೋಪವಲ್ಲವೇ ? ಎಂಬ ಪ್ರಶ್ನೆ ಎದ್ದಿದೆ.
-
ಮೂಲಭೂತ ಹಕ್ಕುಗಳ ಉಲ್ಲಂಘನೆ: ತನಿಖೆಗೆ ಒಳಪಟ್ಟ ವ್ಯಕ್ತಿಯನ್ನು ನಡೆಸಿಕೊಳ್ಳುವ ರೀತಿ ಮತ್ತು ಅವರ ಮೂಲಭೂತ ಹಕ್ಕುಗಳನ್ನು ಗೌರವಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಿಜಯನ್ ದೂರಿದ್ದಾರೆ.
ನ್ಯಾಯಾಂಗ ತನಿಖೆಗೆ ಒತ್ತಾಯ
ಮಾಧ್ಯಮ ವರದಿಗಳು ಸತ್ಯವಾಗಿದ್ದರೆ, ಇದು ಐಟಿ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ಗಂಭೀರ ಲೋಪವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ, ಸತ್ಯಾಸತ್ಯತೆಯನ್ನು ಹೊರತರಲು ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಉನ್ನತ ಮಟ್ಟದ ನ್ಯಾಯಾಂಗ ತನಿಖೆ ಅಗತ್ಯ ಎಂದು ಅವರು ಮನವಿ ಮಾಡಿದ್ದಾರೆ.
