ಕೇರಳದ ಬಸವರತ್ನ ಪುರಸ್ಕಾರಕ್ಕೆ ಶತಾಯುಷಿ ಭೀಮಣ್ಣ ಖಂಡ್ರೆ ಆಯ್ಕೆ

ತಿರುವನಂತಪುರದಲ್ಲಿ ಮೇ 4ರಂದು ಪ್ರಶಸ್ತಿ ಪ್ರದಾನ

11

ಕೇರಳ ರಾಜ್ಯದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೀಡುವ ಪ್ರತಿಷ್ಠಿತ ಬಸವರತ್ನ ಪುರಸ್ಕಾರಕ್ಕೆ ಮಾಜಿ ಸಾರಿಗೆ ಸಚಿವ ಮತ್ತು ಲೋಕನಾಯಕ, ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.

ಮೇ 4ರಂದು ತಿರುವನಂತಪುರಂ ಜಿಲ್ಲೆಯ ವಟ್ಟಾಪ್ಪುರದ ವೀರಶೈವ ಭವನದಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಭೀಮಣ್ಣ ಖಂಡ್ರೆ ಅವರ ಪರವಾಗಿ ಅವರ ಪುತ್ರ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ಕೇರಳ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಭೀನು ಕೆ ಶಂಕರ್ ತಿಳಿಸಿದ್ದಾರೆ.

ಶತಾಯುಷಿ ಭೀಮಣ್ಣ ಖಂಡ್ರೆ ಅವರು ಮಹಾಸಭಾದ ಹಿರಿಯ ನಾಯಕರಾಗಿರುವುದಷ್ಟೇ ಅಲ್ಲ, ಸಮಾಜ ಸೇವಕರಾಗಿ ಬದ್ಧತೆಯನ್ನು ತೋರಿದ್ದಾರೆ. ಮುತ್ಸದ್ದಿ ರಾಜಕಾರಣಿಯಾಗಿರುವ ಅವರು ಬಸವ ತತ್ವಗಳನ್ನು ಅನುಸರಿಸುವವರಾಗಿದ್ದಾರೆ. ಅವರ ಜೀವನ ಮತ್ತು ಕೊಡುಗೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿವೆ. ಇಂತಹ ಮಹಾನ್ ವ್ಯಕ್ತಿಗೆ ಕೇರಳ ರಾಜ್ಯ ಘಟಕದ ಉನ್ನತ ಪುರಸ್ಕಾರವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಶಂಕರ್ ಹೇಳಿದ್ದಾರೆ.

Exit mobile version