ಬೆಂಗಳೂರು, ಮಾರ್ಚ್ ,27: ಬೆಂಗಳೂರಿನ ʻಕಾವೇರಿ ಹಾಸ್ಪಿಟಲ್ಸ್ʼ ಕರ್ನಾಟಕದ 100 ರೈತರಿಗೆ ಉಚಿತ ರೊಬೊಟಿಕ್ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆ ಒದಗಿಸುವ ಗುರಿಯೊಂದಿಗೆ ತನ್ನ ಮಹತ್ವಾಕಾಂಕ್ಷೆಯ ಉಪಕ್ರಮ ‘ಕಾವೇರಿ ಸಂಕಲ್ಪʼ ಪ್ರಾರಂಭಿಸುವುದಾಗಿ ಇಂದು ಪ್ರಕಟಿಸಿದೆ.
ಇದೊಂದು ʻರೊಬೊಟಿಕ್ ಆಧರಿತ ಜಂಟಿ ಭರವಸೆಯ ಕಾರ್ಯಕ್ರಮʼವಾಗಿದೆ. ಇದರ ಅಡಿಯಲ್ಲಿ ಕರ್ನಾಟಕದಾದ್ಯಂತ ಆರ್ಥಿಕವಾಗಿ ಅರ್ಹ ರೈತರಿಗೆ 100 ಉಚಿತ ರೊಬೊಟಿಕ್ ಮೊಣಕಾಲು ಕೀಲು ಕಸಿ ಶಸ್ತ್ರಚಿಕಿತ್ಸೆಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ʻಕಾವೇರಿ ಹಾಸ್ಪಿಟಲ್ಸ್ʼನ ಬೆಂಗಳೂರು ವಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಭಾಸ್ಕರನ್ ಹಾಗೂ ʻಕಾವೇರಿ ಹಾಸ್ಪಿಟಲ್ಸ್ʼ ಎಲೆಕ್ಟ್ರಾನಿಕ್ ಸಿಟಿ ಮತ್ತು ಮಾರತ್ತಹಳ್ಳಿ ಘಟಕಗಳ ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಈ ಮಹತ್ವಾಕಾಂಕ್ಷೆಯ ಉಪಕ್ರಮಕ್ಕೆ ಔಪಚಾರಿಕವಾಗಿ ಚಾಲನೆ ನೀಡಿದರು.
ನಂತರ ಮಾತನಾಡಿದ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರು, ಈ ಉಪಕ್ರಮವನ್ನು ಶ್ಲಾಘಿಸಿದರು. ” ಖಾಸಗಿ ಆಸ್ಪತ್ರೆ ಈ ರೀತಿಯಾಗಿ ಸಿಎಸ್ಆರ್ ಹಣವನ್ನು ಬಳಸುತ್ತಿರುವುದು ಸಂತೋಷ ತಂದಿದೆ. ರೈತರು ನಮ್ಮ ಆರ್ಥಿಕತೆಯ ಅಡಿಪಾಯವಾಗಿದ್ದಾರೆ. ಆದರೂ ಅವರ ಆರೋಗ್ಯವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ʻಕಾವೇರಿ ಸಂಕಲ್ಪʼದಂತಹ ಉಪಕ್ರಮಗಳು ನಮ್ಮೆಲ್ಲರ ಹೃತ್ಪೂರ್ವಕ ಬೆಂಬಲಕ್ಕೆ ಅರ್ಹವಾಗಿವೆ. ಇಂತಹ ಕಾರ್ಯಕ್ರಮಗಳು ನಿರ್ಣಾಯಕ ಆರೋಗ್ಯ ಅಂತರಗಳನ್ನು ಪರಿಹರಿಸುವುದಲ್ಲದೆ, ನಮ್ಮ ರೈತ ಸಮುದಾಯವನ್ನು ಅವರ ದೈಹಿಕ ಶಕ್ತಿ ಮತ್ತು ಘನತೆಯನ್ನು ಪುನಃಸ್ಥಾಪಿಸುವ ಮೂಲಕ ಸಬಲೀಕರಣಗೊಳಿಸುತ್ತವೆ,ʼʼ ಎಂದು ಹೇಳಿದರು.
ಬೆಂಗಳೂರು ಮತ್ತು ಹೊಸೂರಿನ ʻಕಾವೇರಿ ಹಾಸ್ಪಿಟಲ್ಸ್ʼ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ಎಸ್.ವಿಜಯಭಾಸ್ಕರನ್ ಅವರು ಮಾತನಾಡಿ, ʻಕಾವೇರಿ ಸಂಕಲ್ಪʼದ ಹಿಂದಿನ ತಮ್ಮ ವೈಯಕ್ತಿಕ ಪ್ರೇರಣೆಯನ್ನು ಹಂಚಿಕೊಂಡರು. “ಕೃಷಿ ಎಂಜಿನಿಯರ್, ಪ್ರಾಧ್ಯಾಪಕ ಮತ್ತು ಸಂಶೋಧಕನಾಗಿ ಸುಮಾರು ಎರಡು ದಶಕಗಳನ್ನು ಕಳೆದಿರುವ ನಾನು ನಮ್ಮ ರೈತರಿಗೆ ಆಗುವ ದೈಹಿಕ ಹಾನಿಯನ್ನು ನೇರವಾಗಿ ನೋಡಿದ್ದೇನೆ. ಆರಂಭದಲ್ಲೇ ಚಿಕಿತ್ಸೆ ನೀಡಿದ್ದಾದರೆ ಅಸ್ಥಿಸಂಧಿವಾತವನ್ನು ಹೆಚ್ಚಿನ ಕೊಯ್ಯವಿಕೆ ಚಿಕಿತ್ಸಾವಿಧಾನಗಳ ಅಗತ್ಯವಿಲ್ಲದೆಯೇ ನಿರ್ವಹಿಸಬಹುದು. ಆದರೆ, ಸೀಮಿತ ಜಾಗೃತಿ ಮತ್ತು ಸೌಲಭ್ಯಗಳ ಅಲಭ್ಯತೆಯಿಂದಾಗಿ, ರೈತರು ಬಹುತೇಕ ಸಂದರ್ಭಗಳಲ್ಲಿ ಈ ಚಿಕಿತ್ಸೆಯನ್ನು ವಿಳಂಬಗೊಳಿಸುತ್ತಾರೆ ಮತ್ತು ಆ ಮೂಲಕ ಕೀಲು ಕಸಿ ಅನಿವಾರ್ಯ ಎಂಬ ಹಂತವನ್ನು ತಲುಪುತ್ತಾರೆ.
ʻಕಾವೇರಿ ಸಂಕಲ್ಪʼ ಕಾರ್ಯಕ್ರಮವು ನನ್ನ ಅನುಭವ ಹಾಗೂ ರೈತ ಸಮುದಾಯಕ್ಕೆ ಚಲನಶೀಲತೆಯನ್ನು ಪುನಃಸ್ಥಾಪಿಸುವ ಮೂಲಕ ಹಾಗೂ ಅವರು ಸಕ್ರಿಯ ಕೃಷಿಗೆ ಮರಳಲು ಸಹಾಯ ಮಾಡುವ ಮೂಲಕ ಅವರಿಂದ ಪಡೆದದ್ದನ್ನು ಹಿಂದಿರುಗಿಸಬೇಕೆಂಬ ನನ್ನ ಆಶಯದಿಂದ ಸ್ಫೂರ್ತಿ ಪಡೆದಿದೆ. ಈ ಉಪಕ್ರಮವು ಕೇವಲ ವೈದ್ಯಕೀಯ ಮಧ್ಯಸ್ಥಿಕೆಗಿಂತಲೂ ಮಿಗಿಲಾದದ್ದು; ಇದು ವಿಶ್ವದರ್ಜೆಯ ಆರೋಗ್ಯ ಆರೈಕೆಯನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವ ʻಕಾವೇರಿ ಹಾಸ್ಪಿಟಲ್ಸ್ʼನ ಬದ್ಧತೆಯನ್ನು ಪ್ರತಿನಿಧಿಸುತ್ತದೆ,ʼʼ ಎಂದು ಹೇಳಿದರು.
ಕಾವೇರಿ ಸಂಕಲ್ಪʼದ ಅಡಿಯಲ್ಲಿ, ಸಕ್ರಿಯ ಚಲನಶೀಲತೆಯನ್ನು ಪುನಃಸ್ಥಾಪಿಸುವ ನಿಟ್ಟಿನಲ್ಲಿ ಕೀಲು ಕಸಿ ಅಗತ್ಯವಿರುವ ಅರ್ಹ ರೈತರಿಗೆ ಮಾತ್ರ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ಫಲಾನುಭವಿಗಳನ್ನು ಎಚ್ಚರಿಕೆಯಿಂದ ಪರೀಕ್ಷಿಸಲಾಗುತ್ತದೆ. ವೈದ್ಯಕೀಯ ಮೌಲ್ಯಮಾಪನಗಳು ಮತ್ತು ಸಾಮಾಜಿಕ ಆರ್ಥಿಕ ಹಿನ್ನೆಲೆ ಪರಿಶೀಲನೆಯನ್ನು ಒಳಗೊಂಡ ಕಠಿಣ ಆಯ್ಕೆ ಪ್ರಕ್ರಿಯೆಯು ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.ʻ
ಕಾವೇರಿ ಹಾಸ್ಪಿಟಲ್ಸ್ʼನ ಎಲೆಕ್ಟ್ರಾನಿಕ್ ಸಿಟಿ ಮತ್ತು ಮಾರತ್ತಹಳ್ಳಿ ಘಟಕಗಳಲ್ಲಿನ ಮೂಳೆ ವಿಭಾಗಗಳು ರೊಬೊಟಿಕ್ ನೆರವಿನ ಕೀಲು ಕಸಿ ಶಸ್ತ್ರಚಿಕಿತ್ಸೆಗಳಲ್ಲಿ ಶ್ರೇಷ್ಠತೆಯ ದಾಖಲೆಯನ್ನು ಹೊಂದಿವೆ. ಅತ್ಯಾಧುನಿಕ ರೊಬೊಟಿಕ್ ಶಸ್ತ್ರಚಿಕಿತ್ಸಾ ವ್ಯವಸ್ಥೆಗಳೊಂದಿಗೆ, ರೋಗಿಗಳು ನಿಖರವಾದ ಶಸ್ತ್ರಚಿಕಿತ್ಸೆ, ಕನಿಷ್ಠ ನೋವು, ವೇಗದ ಚೇತರಿಕೆ, ಕ್ಷಿಪ್ರ ಪೂರ್ವ ಸಿದ್ಧತೆ ಮತ್ತು ಸ್ವಾಭಾವಿಕವೆಂಬಂತೆ ಭಾಸವಾಗುವ ಕೀಲುಗಳ ಅನುಭವವನ್ನು ಪಡೆಯುತ್ತಾರೆ. ನಾಗಮಂಗಲ, ಹಾಸನ, ದಾವಣಗೆರೆ, ಮಂಗಳೂರು, ಹುಬ್ಬಳ್ಳಿ, ಕೋಲಾರ ಭಾಗಗಳಲ್ಲಿ ಏಪ್ರಿಲ್ ತಿಂಗಳಿನಲ್ಲಿ ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಿ ಅರ್ಹರಿಗೆ ಸೌಲಭ್ಯ ಒದಗಿಸಲಾಗುವುದು. ಪ್ರತಿ ವರ್ಷವೂ ವಿವಿಧ ವೈಧ್ಯಕೀಯ ಸೌಲಭ್ಯಗಳನ್ನು ʻಕಾವೇರಿ ಹಾಸ್ಪಿಟಲ್ಸ್ʼ ಉಚಿತವಾಗಿ ಒದಗಿಸಲಿದೆ.ಆಸಕ್ತ ರೈತರು ಅರ್ಹ ʻಕಾವೇರಿ ಸಂಕಲ್ಪʼ ಸಹಾಯವಾಣಿ +91 80801 099999 ಗೆ ಸಂಪರ್ಕಿಸಬಹುದು ಮತ್ತು ಅರ್ಹತೆಯನ್ನು ಪರಿಶೀಲಿಸಬಹುದು. ಕೂಡಲೇ ಪ್ರಾರಂಭವಾಗುವ ಮತ್ತು ಏಪ್ರಿಲ್ 30, 2025 ರವರೆಗೆ ಮುಂದುವರಿಯುವ ಸ್ಕ್ರೀನಿಂಗ್ ಶಿಬಿರಗಳಿಗೆ ನೋಂದಾಯಿಸಿಕೊಳ್ಳಬಹುದು.