ಆದಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆ ಖಂಡನೀಯ – ಕಾಶ್ಯಪ ನಂದನ್

07

ಬೆಂಗಳೂರು: ಜಗದ್ಗುರು ಶ್ರೀ ಆದಿ ಶಂಕರ ಭಗವತ್ಪಾದರ ಕುರಿತು ಅವಹೇಳನಕಾರಿ ಹೇಳಿಕೆಗಳು ಕೇಳಿಬಂದಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾದ ಕಾಶ್ಯಪ ನಂದನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಮಾರು 1,200 ವರ್ಷಗಳ ಹಿಂದೆ ಅವತರಿಸಿದ ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು ಭಾರತದೆಲ್ಲೆಡೆ ಸಂಚರಿಸಿ ಸನಾತನ ಧರ್ಮದ ತತ್ವಗಳನ್ನು ಪ್ರಸಾರ ಮಾಡುವುದರ ಜೊತೆಗೆ ಆಧ್ಯಾತ್ಮಿಕ ಜಾಗೃತಿ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸಿದ ಮಹಾನ್ ತತ್ವಜ್ಞಾನಿ ಹಾಗೂ ದಾರ್ಶನಿಕರು. ಅವರ ಅದ್ವೈತ ತತ್ವ ಮತ್ತು ಉಪದೇಶಗಳು ಇಂದಿಗೂ ಕೋಟ್ಯಂತರ ಜನರಿಗೆ ಮಾರ್ಗದರ್ಶಕವಾಗಿವೆ.

ಜುಲೈ 11, 2026ರಂದು ಉಡುಪಿ ರಾಜಾಂಗಣದಲ್ಲಿ ನಡೆದ ಹರಿಕಥಾ ಕಾರ್ಯಕ್ರಮದ ವೇಳೆ ಇಬ್ಬರು ಮಕ್ಕಳು ಶ್ರೀ ಆದಿ ಶಂಕರಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಭಕ್ತರು ಹಾಗೂ ಸಮಾಜದ ಹಲವು ವರ್ಗಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಕಾಶ್ಯಪ ನಂದನ್ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು, “ಯಾವುದೇ ಧರ್ಮ, ಮಠ ಅಥವಾ ಗುರುಪರಂಪರೆಯನ್ನು ಅನುಸರಿಸುವವರ ಜವಾಬ್ದಾರಿ ತಮ್ಮ ಗುರುಗಳ ಆದರ್ಶ, ಮೌಲ್ಯಗಳು ಮತ್ತು ಆಧ್ಯಾತ್ಮಿಕ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವುದಾಗಿದೆ. ಇತರ ಧರ್ಮಗುರುಗಳು, ಸಂತರು ಅಥವಾ ಪರಂಪರೆಗಳ ಬಗ್ಗೆ ಅವಹೇಳನಕಾರಿ ಅಥವಾ ನಿಂದನಾತ್ಮಕ ಹೇಳಿಕೆಗಳನ್ನು ನೀಡುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ವಿಶೇಷವಾಗಿ ಪರ್ಯಾಯ ಮಠದಂತಹ ಪವಿತ್ರ ಸ್ಥಳದಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ದುಃಖಕರ” ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಸಮಾಜದಲ್ಲಿ ಅನಗತ್ಯ ಭಿನ್ನಾಭಿಪ್ರಾಯ ಮತ್ತು ಧಾರ್ಮಿಕ ಉದ್ವಿಗ್ನತೆಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ಕಾರ್ಯಕ್ರಮಗಳ ಆಯೋಜಕರು ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಸೂಕ್ತ ಮೇಲ್ವಿಚಾರಣೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸಮಾಜದಲ್ಲಿ ಪರಸ್ಪರ ಗೌರವ, ಧಾರ್ಮಿಕ ಸಾಮರಸ್ಯ ಮತ್ತು ಸೌಹಾರ್ದತೆಯನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಯಾವುದೇ ವ್ಯಕ್ತಿ ಅಥವಾ ಸಂಘಟನೆ ಮತ್ತೊಂದು ಧರ್ಮ, ಮಠ ಅಥವಾ ಗುರುಪರಂಪರೆಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡದೆ, ಪರಸ್ಪರ ಗೌರವದ ಮನೋಭಾವ ಬೆಳೆಸಬೇಕೆಂದು ಕಾಶ್ಯಪ ನಂದನ್ ಮನವಿ ಮಾಡಿದ್ದಾರೆ.

 

Exit mobile version